ನವದೆಹಲಿ: ರಾಜಧಾನಿಯ ಪಟೇಲ್ ನಗರ ಪ್ರದೇಶದಲ್ಲಿ ಲವ್ ಜಿಹಾದ್ ಪ್ರಕರಣ ನಡೆದಿರುವ ಬಗ್ಗೆ ವರದಿಯಾಗಿದೆ. ನೂರ ಮೊಹಮ್ಮದ್ ಎಂಬಾತ ತನ್ನನ್ನು ತಾನು ಸಿಖ್ ಎಂದು ಹೇಳಿ ಯುವತಿಗೆ ವಂಚಿಸಿದ ಘಟನೆ ಇದಾಗಿದೆ.
ತನ್ನ ಹೆಸರನ್ನು ಗುರಪ್ರೀತ್ ಎಂದು ಹೇಳಿ ಪರಿಚಯಿಸಿಕೊಂಡಿದ್ದ ನೂರ್ ಎಂಬಾತ, ತನ್ನ ಸಿಖ್ ಗೆಳೆಯನನ್ನು ಸಹೋದರನೆಂದು ಹಾಗೂ ಆತನ ಕುಟುಂಬಸ್ಥರನ್ನು ತನ್ನ ಕುಟುಂಬದವರು ಎಂದು ಪರಿಚಯಿಸಿ ಯುವತಿಯ ವಿಶ್ವಾಸ ಸಂಪಾದಿಸಿದ್ದ.
ಆ ನಂತರ ಯುವತಿ ತನ್ನ ಕುಟುಂಬಸ್ಥರ ವಿರೋಧದ ಮಧ್ಯೆಯೂ ಆರೋಪಿಯೊಂದಿಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದರು. ಆದರೆ ಕೆಲ ತಿಂಗಳುಗಳ ನಂತರ ತಾನು ಮದುವೆಯಾಗಿದ್ದು ಮುಸಲ್ಮಾನ ವ್ಯಕ್ತಿಯನ್ನು ಎಂಬುದು ತಿಳಿದಾಗ ಆಕೆಗೆ ನಿಂತ ನೆಲವೇ ಕುಸಿದು ಹೋದಂತೆ ಭಾಸವಾಗಿತ್ತು.
ಮದುವೆಯ ನಂತರ ನೂರ್ ಹಾಗೂ ಆತನ ಕುಟುಂಬದವರು ಯುವತಿಯನ್ನು ಹೊಡೆದು ಬಡಿದು ಕಾಟ ಕೊಡಲಾರಂಭಿಸಿದ್ದರಂತೆ. ಇದರಿಂದ ಭಯಭೀತಳಾದ ಯುವತಿ ಪೊಲೀಸರಿಗೆ ದೂರು ನೀಡಿದ್ದಳು. ಈಗ ಆರೋಪಿ ನೂರ್ ಪರಾರಿಯಾಗಿದ್ದಾನೆ.
2016 ರಲ್ಲಿ ಆರೋಪಿ ಭೇಟಿಯಾಗಿದ್ದೆ ಮತ್ತು ಮದುವೆಯ ಸಮಯದಲ್ಲಿ ತಾನು ಅಪ್ರಾಪ್ತಳಾಗಿದ್ದೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ. 2017ರಲ್ಲಿ ಆರೋಪಿಯು ಸಂತ್ರಸ್ತೆಯ ಕೈ ಮೇಲೆ ಗುರುಪ್ರೀತ್ ಎಂದು ಟ್ಯಾಟೂ ಬರೆಸಿದ್ದ. ಮದುವೆಯಾಗಿ ಸುಮಾರು 2 ತಿಂಗಳ ಬಳಿಕ ಸಂತ್ರಸ್ತೆ ತನ್ನ ಪತಿ ಮುಸ್ಲಿಂ ಆಗಿರುವ ಬಗ್ಗೆ ಕುಟುಂಬಸ್ಥರಿಗೆ ತಿಳಿಸಿದ್ದಾಳೆ.
ನೂರ್ ತನಗೆ ನೇಣು ಹಾಕುವುದಾಗಿ ಬೆದರಿಕೆ ಹಾಕುವ ವಿಡಿಯೋವನ್ನು ಕಳುಹಿಸಿದ್ದು, ಅದರಲ್ಲಿ ತಾನು ಮುಸ್ಲಿಂ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಆಕೆ ಹೇಳಿದ್ದಾಳೆ. ನೂರ್ ಆಕೆಯನ್ನು ಆಗಾಗ ಹೊಡೆಯುತ್ತಿದ್ದರೂ, ಮಗುವಿನ ಸಲುವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.
ಸಿಖ್ ಧರ್ಮದ ವ್ಯಕ್ತಿಯ ರೂಪದಲ್ಲಿ ಆರೋಪಿ ಹಾಗೂ ಆತನ ಕುಟುಂಬದವರು ತನ್ನನ್ನು ಭೇಟಿಯಾಗಿದ್ದರು. ಮಗಳು ಖುಷಿಯಾಗಿದ್ದರೆ ಅಷ್ಟೇ ಸಾಕು ಎಂದು ನಾವು ಹೆಚ್ಚೇನೂ ವಿಚಾರಣೆ ಮಾಡಲಿಲ್ಲ. ಆದರೆ ಮದುವೆಯ ನಂತರ ತನ್ನ ಗಂಡ ಮುಸಲ್ಮಾನ ಎಂದು ಮಗಳು ಹೇಳಿದಳು. ಇಷ್ಟಾದರೂ ಮಗುವಿನ ಕಾರಣದಿಂದ ಪತಿಯೊಂದಿಗೇ ಇರುವುದಾಗಿ ಮಗಳು ಹೇಳಿದ್ದಳು ಎಂದು ಸಂತ್ರಸ್ತೆಯ ತಂದೆ ನೋವು ತೋಡಿಕೊಂಡಿದ್ದಾರೆ..
ಇದನ್ನೂ ಓದಿ: ಲಕ್ನೋದಲ್ಲಿ ಲವ್ ಜಿಹಾದ್ ಆರೋಪ ಪ್ರಕರಣ: ಮತಾಂತರಕ್ಕೆ ವಿರೋಧಿಸಿದ್ದಕ್ಕೆ ಮಹಡಿಯಿಂದ ತಳ್ಳಿದ್ನಾ ಕಿರಾತಕ?