ನೈಜ ಜೀವನದಲ್ಲಿ ಘಟಿಸುವ ಕೆಲ ಘಟನೆಗಳು ಕಾಲ್ಪನಿಕ ಕಥೆಗಳಿಗಿಂತ ರೋಚಕವಾಗಿರುತ್ತವೆ. ತನ್ನ 7ನೇ ವಯಸ್ಸಿನಲ್ಲಿ ತನ್ನೂರು ತನ್ನ ಮನೆ ಬಿಟ್ಟು ಬಂದು ದೂರದ ಕಾಸರಗೋಡಿನಲ್ಲಿರುವ ಹಾಶೀಮ್ನ ಕಥೆಯೂ ಹೀಗೆಯೇ ಇದೆ. ಉತ್ತರ ಭಾರತದ ಯಾವುದೋ ರಾಜ್ಯವೊಂದರ ಹಳ್ಳಿಯಲ್ಲಿದ್ದ ಹಾಶೀಮ್. ಊರಲ್ಲಿ ಅದೇನೋ ಗಲಭೆಗಳು ಆರಂಭವಾದವು ಅಂತ ಮನೆ ಬಿಟ್ಟು ಓಡಿ ಬಂದವ ಸೇರಿದ್ದು ಕಾಸರಗೋಡು. ಅಲ್ಲಿ ಆತನಿಗೆ ಸಿಕ್ಕಿತ್ತು ಒಂದು ಆಶ್ರಯ, ಮನೆಯ ಪ್ರೀತಿ.. ಈ ಜಗತ್ತಿನಲ್ಲಿ ಯಾರೂ ಅನಾಥರಲ್ಲ.
ಹಾಶೀಮ್.. ಆತ ಕಾಸರಗೋಡಿನ ಕಾಞಂಗಾಡ್ ಪ್ರದೇಶದಲ್ಲಿನ ಆ ಮನೆಯಲ್ಲಿನ ಕುಟುಂಬದೊಂದಿಗೆ ನವೆಂಬರ್ 2005 ರಿಂದ ಇದ್ದಾನೆ. ಆತ ಅಲ್ಲಿಗೆ ಬಂದ ದಿನ ಆತನ ಕೈಯಲ್ಲೊಂದು ಬೋರ್ಡ್ ಇತ್ತು.. ಅದರ ಮೇಲೆ ಬರೆದಿತ್ತು.. "ಈ ಹುಡುಗ ಅನಾಥ. ಯಾರಾದರೂ ಈತನನ್ನು ಅನಾಥಾಶ್ರಮಕ್ಕೆ ಸೇರಿಸಿ." ಕಾಞಂಗಾಡಿನ ಸಣ್ಣ ಅಂಗಡಿಯೊಂದರ ಮುಂದೆ ಆತ ನಿಂತಿದ್ದ. ನಂತರ 15 ವರ್ಷದ ಇನ್ನೊಬ್ಬ ಬಾಲಕ ಶಾಜೀರ್ನ ಕೈಹಿಡಿದು ಆತನ ಮನೆಗೆ ನಡೆದಿದ್ದ.
ಆ ದಿನದಿಂದ ಹಾಶೀಮ್ ಆ ಮನೆಯ ಸದಸ್ಯನೇ ಆದ. ಅದರ ನಂತರ ಆತ ಮತ್ತೆ ಯಾವತ್ತೂ ಅಳುವ ಸಂದರ್ಭ ಬರಲೇ ಇಲ್ಲ. ಆದರೂ, ತನ್ನನ್ನು ಹಡೆದ ತಾಯಿ ಯಾರೆಂಬುದನ್ನು ನೋಡು ಉತ್ಕಟ ಆಸೆ ಮಾತ್ರ ಹುಡುಗನಿಗಿತ್ತು. ಶಾಜೀರ್ನ ತಂದೆ ಅಬ್ದುಲ್ ಕರೀಮ್ ಹಾಗೂ ಆತನ ತಾಯಿಯೊಂದಿಗೆ ಹಾಶೀಮ್ ನೆಮ್ಮದಿಯಾಗಿದ್ದ. ಆ ಮನೆಯ ಸದಸ್ಯನಾಗಿದ್ದುಕೊಂಡು ವಿದ್ಯಾಭ್ಯಾಸವನ್ನೂ ಮಾಡಿದ ಹಾಶೀಮ್. ನಂತರ ಅಬ್ದುಲ್ ಕರೀಮ್ ಅವರ ಸಂಬಂಧಿಯೊಬ್ಬರ ಸಹಾಯದಿಂದ ಗಲ್ಫ್ ದೇಶದ ಕಂಪನಿಯೊಂದರಲ್ಲಿ ಕೆಲಸ ಹಿಡಿದು ಅಲ್ಲಿಗೆ ತೆರಳಿದ.