ಅಹಮದ್‌ನಗರ (ಮಹಾರಾಷ್ಟ್ರ):ನೀರು ಬತ್ತಿಹೋದ ಕೊಳವೆ ಬಾವಿಗೆ ಬಿದ್ದಿದ್ದ ಮಗುವೊಂದು ಪ್ರಾಣ ಕಳೆದುಕೊಂಡಿದೆ. ಸತತ 8 ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮಗುವಿನ ಜೀವ ಉಳಿಸಲಾಗಲಿಲ್ಲ. ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ.
ಅಹಮದ್‌ನಗರ ಜಿಲ್ಲೆಯ ಕರ್ಜತ್ ತಾಲೂಕಿನ ಕೋಪರ್ಡಿ ಎಂಬಲ್ಲಿ ಕಬ್ಬು ಕಾರ್ಮಿಕರೊಬ್ಬರ 5 ವರ್ಷದ ಪುತ್ರ ಜಮೀನಿನಲ್ಲಿದ್ದ ಬೋರ್‌ವೆಲ್‌ಗೆ ಸೋಮವಾರ ಸಂಜೆ 6 ಗಂಟೆಗೆ ಅಚಾನಕ್ಕಾಗಿ ಬಿದ್ದಿದ್ದಾನೆ. ಬಾಲಕ ಬೋರ್‌ವೆಲ್‌ಗೆ ಬಿದ್ದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಜನರು ಹೆಚ್ಚಿನ ಸಂಖ್ಯೆಯಲ್ಲಿ ಘಟನಾ ಸ್ಥಳದಲ್ಲಿ ಜಮಾಯಿಸಿದರು. ಈ ಬಗ್ಗೆ ಪೊಲೀಸ್ ಠಾಣೆಗೆ ಕುಟುಂಬಸ್ಥರು ಮಾಹಿತಿ ನೀಡಿದರು.
ಬಾಲಕನ ರಕ್ಷಣೆಗಾಗಿ ತಕ್ಷಣವೇ ಸ್ಥಳಕ್ಕಾಗಮಿಸಿದ ರಕ್ಷಣಾ ಸಿಬ್ಬಂದಿ ಜೆಸಿಬಿ ಸಹಾಯದಿಂದ ಬೋರ್‌ವೆಲ್ ಬಳಿ ಅಗೆಯಲು ಆರಂಭಿಸಿದರು. ಬಾಲಕ ಸಾಗರ್ ಬುಧ ಬರೇಲಾ ಹಲವು ಅಡಿಗಳ ಒಳಗೆ ಕೊಳವೆಬಾವಿಯಲ್ಲಿ ಸಿಲುಕಿದ್ದ. ರಕ್ಷಣಾ ಸಿಬ್ಬಂದಿ ಮೇಲಿನಿಂದ ಆಮ್ಲಜನಕ ನೀಡಿ, ಉಸಿರಾಟಕ್ಕೆ ತೊಂದರೆಯಾಗದಂತೆ ನೋಡಿಕೊಂಡರು.
ರಾತ್ರಿ 2 ಗಂಟೆವರೆಗೆ ಕಾರ್ಯಾಚರಣೆ:ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್‌ನ 5 ತಂಡಗಳು ಭಾಗವಹಿಸಿದ್ದವು. ತಾಲೂಕು ಆಡಳಿತ ಮಗುವಿನ ತೀವ್ರ ನಿಗಾ ವಹಿಸಿತ್ತು. ರಾತ್ರಿ ಎರಡೂವರೆ ಗಂಟೆಯವರೆಗೂ ಮಗುವನ್ನು ರಕ್ಷಿಸುವ ಪ್ರಯತ್ನ ನಡೆಯಿತು. ಕತ್ತಲಾಗಿದ್ದ ಕಾರಣ ನಿಖರವಾಗಿ ಮಗು ಎಷ್ಟು ಆಳದಲ್ಲಿ ಸಿಲುಕಿದ್ದ ಎಂಬುದು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ. ಬಳಿಕ ಬಾಲಕ ಬೋರ್‌ವೆಲ್‌ನಲ್ಲಿ 15 ಅಡಿ ಆಳದಲ್ಲಿ ಪತ್ತೆಯಾಗಿದ್ದ. ಕೊಳವೆಬಾವಿಗೆ 15 ಅಡಿ ಸಮಾನಾಂತರವಾಗಿ ಜೆಸಿಬಿಗಳ ಸಹಾಯದಿಂದ ಅಗೆಯಲಾಯಿತು.