ಆಲಪ್ಪುಳ(ಕೇರಳ):ಗ್ಯಾಸ್ ದರ ಗಗನಕ್ಕೇರಿದ್ದಲ್ಲದೇ ಸರ್ಕಾರ ಅದಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನೂ ಸ್ಥಗಿತಗೊಳಿಸಿದೆ. ಗ್ಯಾಸ್ ಖರೀದಿಸಲು ಜನರು ಇನ್ನಿಲ್ಲದ ಪ್ರಯಾಸ ಪಡುತ್ತಿದ್ದರೆ, ಇಲ್ಲೊಬ್ಬರು 9 ವರ್ಷಗಳಿಂದ ಗ್ಯಾಸ್ ಖರೀದಿಸದೆಯೇ ಅಡುಗೆ ಮನೆಯಲ್ಲಿ ಗ್ಯಾಸ್ ಸೌಲಭ್ಯ ಪಡೆದಿದ್ದಾರೆ.
ಇಲ್ಲಿ ಬೋರ್ವೆಲ್ ಪೈಪ್ನಿಂದಲೇ ಬರುತ್ತೆ ಗ್ಯಾಸ್.. ಒಂದು ರೂಪಾಯಿ ಖರ್ಚಿಲ್ಲ!! ಅದು ಹೇಗೆ ಸಾಧ್ಯ ಅಂತೀರಾ. ಕೇರಳದ ಆಳಪ್ಪುಳ ಜಿಲ್ಲೆಯ ಅರಟ್ಟುವಾಜಿ ನಿವಾಸಿಯಾದ ರತ್ನಮ್ಮ ಎಂಬುವರು ನಿಸರ್ಗದತ್ತ, ಉಚಿತವಾಗಿ ಅಡುಗೆ ಗ್ಯಾಸ್ ಪಡೆದಿದ್ದಾರೆ. ಅರಟ್ಟುವಾಜಿಯಲ್ಲಿ ನೀರಿನ ಸಂಕಷ್ಟ ತಲೆದೋರಿದಾಗ ರತ್ನಮ್ಮನವರ ಕುಟುಂಬಸ್ಥರು ಮನೆಯ ಪಕ್ಕದಲ್ಲಿಯೇ ಬೋರ್ವೆಲ್ ಕೊರೆಸಿದ್ದಾರೆ.
ಅದರಲ್ಲಿ ನೀರು ಬಂದಿರಲಿಲ್ಲ. ಈ ವೇಳೆ ಬೋರ್ವೆಲ್ಗೆ ಅಳವಡಿಸಿದ್ದ ಪೈಪ್ ಅನ್ನು ಅಗಲ ಮಾಡಲೆಂದು ಬೆಂಕಿಕಡ್ಡಿಯನ್ನು ಹಚ್ಚಿದಾಗ ಭಾರೀ ಜ್ವಾಲೆ ಉರಿದಿದೆ. ಅಚಾನಕ್ಕಾಗಿ ನಡೆದ ಈ ಘಟನೆಯಿಂದ ಕುಟುಂಬಸ್ಥರು ಹೆದರಿದ್ದಾರೆ. ಅಲ್ಲದೇ, ಆ ಪೈಪ್ನಿಂದ ದಿನವೂ ಅನಿಲದ ವಾಸನೆ ಬರುತ್ತಲೇ ಇತ್ತು.
ಬೆಂಕಿ ಕೊರೆದಾಗ ಭಾರೀ ಜ್ವಾಲೆ ಉರಿಯುತ್ತಿತ್ತು. ಈ ವಿದ್ಯಮಾನವನ್ನು ಭೂವಿಜ್ಞಾನ ಮತ್ತು ಪೆಟ್ರೋಲಿಯಂ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅದರ ಮಾದರಿ ಸಂಗ್ರಹಿಸಿ ಪರೀಕ್ಷಿಸಿದಾಗ, ಅದು ಮಿಥೇನ್ ಅನಿಲ ಎಂದು ದೃಢಪಡಿಸಿದ್ದಾರೆ. ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಕೆಲ ದಿನಗಳ ಬಳಿಕ ಇದು ನಿಂತು ಹೋಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಳಿಕ ಕುಟುಂಬಸ್ಥರು ಇದನ್ನು ಅಡುಗೆ ಗ್ಯಾಸ್ ಆಗಿ ಬಳಕೆ ಮಾಡಿಕೊಳ್ಳಲು ನಿರ್ಧರಿಸಿ ಪೈಪ್ ಸಹಾಯದ ಮೂಲಕ ಮನೆಗೆ ಸಂಪರ್ಕ ಕಲ್ಪಿಸಿದ್ದಾರೆ. ಅಂದಿನಿಂದ ಅಡುಗೆ ಗ್ಯಾಸ್ ಆಗಿ ಮಿಥೇನ್ ಅನಿಲವನ್ನೇ ಬಳಸಿಕೊಳ್ಳುತ್ತಿದ್ದಾರೆ. ಈವರೆಗೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಭಾರೀ ಮಳೆ ಬಂದು ನೀರು ನಿಂತಾಗ ಅನಿಲ ಕಡಿಮೆಯಾಗುತ್ತದೆ ಎಂದು ರತ್ನಮ್ಮ ಅವರು ತಿಳಿಸಿದ್ದಾರೆ.
ಈ ಮೂಲಕ ಕೇರಳದ ಕುಟುಂಬವೊಂದು ನೈಸರ್ಗಿಕವಾಗಿ ಸಿಕ್ಕ ಅನಿಲವನ್ನು ಅಡುಗೆ ಮಾಡಲು ಗ್ಯಾಸ್ ಆಗಿ ಬಳಸಿಕೊಳ್ಳುತ್ತಿದ್ದಾರೆ. ಇದಲ್ಲದೇ ಈ ಮನೆಗೆ ಅನೇಕ ಸಂಶೋಧನಾ ವಿದ್ಯಾರ್ಥಿಗಳು ಭೇಟಿ ನೀಡಿ ಈ ವಿದ್ಯಮಾನದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರಂತೆ.
ಇದನ್ನೂ ಓದಿ:ಪ್ರಸಿದ್ಧ ಗಾಯಕ ಸೋನು ನಿಗಮ್ ಮತ್ತು ಕುಟುಂಬಸ್ಥರಿಗೆ ಕೋವಿಡ್ ದೃಢ!