ನವದೆಹಲಿ :ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು, ಚಾಲನಾ ಪರವಾನಗಿ ಪಡೆಯಲು, ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ, ಆಧಾರ್ ಸಂಖ್ಯೆ ನೋಂದಣಿಗೆ, ವಿವಾಹ ನೋಂದಣಿಗೆ, ಸರ್ಕಾರಿ ಉದ್ಯೋಗ ನೇಮಕಾತಿ ಮತ್ತು ಕೇಂದ್ರ ಸರ್ಕಾರ ನಿರ್ಧರಿಸಿದ ಇನ್ನಿತರ ಯಾವುದೇ ಉದ್ದೇಶಕ್ಕಾಗಿ ಜನನ ಪ್ರಮಾಣಪತ್ರವನ್ನು ಏಕೈಕ ದಾಖಲೆಯಾಗಿ ಬಳಸುವುದನ್ನು ಕಡ್ಡಾಯಗೊಳಿಸುವ ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ಕೇಂದ್ರ ಗೃಹ ಸಚಿವಾಲಯವು ಬುಧವಾರ ಹೊರಡಿಸಿದ ಅಧಿಸೂಚನೆಯಲ್ಲಿ ಈ ಕುರಿತು ಘೋಷಣೆ ಮಾಡಿದ್ದು, ಅಕ್ಟೋಬರ್ 1 ರಿಂದ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರಲಿದ್ದು, ಇದು ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಡೇಟಾಬೇಸ್ ಅನ್ನು ರಚಿಸಲು ಸಹಾಯ ಮಾಡಲಿದೆ. ಅಲ್ಲದೇ ಇದು ಸಾರ್ವಜನಿಕ ಸೇವೆಗಳು ಮತ್ತು ಸಾಮಾಜಿಕ ಯೋಜನೆಗಳು ಮತ್ತು ಡಿಜಿಟಲ್ ನೋಂದಣಿಯ ಪರಿಣಾಮಕಾರಿ ಮತ್ತು ಪಾರದರ್ಶಕ ವಿತರಣೆಯನ್ನು ಖಚಿತಪಡಿಸುತ್ತದೆ.
"ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ, 2023 (2023 ರ 20) ರ ಸೆಕ್ಷನ್ 1 ರ ಉಪ-ವಿಭಾಗ (2) ರ ಅಡಿ ನೀಡಲಾದ ಅಧಿಕಾರಗಳನ್ನು ಚಲಾಯಿಸಲು, ಕೇಂದ್ರ ಸರ್ಕಾರವು ಈ ಮೂಲಕ 2023 ರ ಅಕ್ಟೋಬರ್ 1 ನೇ ದಿನವನ್ನು ಸದರಿ ಕಾಯ್ದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವಾಗಿ ಘೋಷಿಸುತ್ತದೆ" ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ
ಕಳೆದ ತಿಂಗಳು ಮುಕ್ತಾಯಗೊಂಡ ಮುಂಗಾರು ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳು ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಮಸೂದೆ, 2023 ಅನ್ನು ಅಂಗೀಕರಿಸಿವೆ. ರಾಜ್ಯಸಭೆ ಆಗಸ್ಟ್ 7 ರಂದು ಧ್ವನಿ ಮತದಿಂದ ಮಸೂದೆಯನ್ನು ಅಂಗೀಕರಿಸಿದರೆ, ಲೋಕಸಭೆ ಆಗಸ್ಟ್ 1 ರಂದು ಅಂಗೀಕರಿಸಿದೆ.
1969 ರ ಕಾಯ್ದೆಗೆ ತಿದ್ದುಪಡಿಯನ್ನು ಕೋರಿದ ಮಸೂದೆಯನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಮಂಡಿಸಿದ್ದರು. ಈ ಕಾಯ್ದೆಯು ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಡೇಟಾಬೇಸ್ ಅನ್ನು ನಿರ್ವಹಿಸಲು ಭಾರತದ ರಿಜಿಸ್ಟ್ರಾರ್ ಜನರಲ್ಗೆ ಅಧಿಕಾರ ನೀಡುತ್ತದೆ. ಮುಖ್ಯ ರಿಜಿಸ್ಟ್ರಾರ್ಗಳು (ರಾಜ್ಯಗಳಿಂದ ನೇಮಕಗೊಂಡವರು) ಮತ್ತು ರಿಜಿಸ್ಟ್ರಾರ್ಗಳು (ಸ್ಥಳೀಯ ಪ್ರದೇಶ ನ್ಯಾಯವ್ಯಾಪ್ತಿಗಾಗಿ ರಾಜ್ಯಗಳಿಂದ ನೇಮಕಗೊಂಡವರು) ನೋಂದಾಯಿತ ಜನನ ಮತ್ತು ಮರಣಗಳ ಡೇಟಾವನ್ನು ರಾಷ್ಟ್ರೀಯ ಡೇಟಾಬೇಸ್ನೊಂದಿಗೆ ಹಂಚಿಕೊಳ್ಳಲು ಬದ್ಧರಾಗಿರುತ್ತಾರೆ. ಮುಖ್ಯ ರಿಜಿಸ್ಟ್ರಾರ್ ರಾಜ್ಯ ಮಟ್ಟದಲ್ಲಿ ಇದೇ ರೀತಿಯ ಡೇಟಾಬೇಸ್ ಅನ್ನು ನಿರ್ವಹಿಸುತ್ತಾರೆ. ಈ ಹಿಂದೆ, ಕೆಲ ನಿರ್ದಿಷ್ಟ ವ್ಯಕ್ತಿಗಳು ಜನನ ಮತ್ತು ಮರಣಗಳನ್ನು ರಿಜಿಸ್ಟ್ರಾರ್ಗೆ ವರದಿ ಮಾಡುವ ಅವಶ್ಯಕತೆ ಇತ್ತು.
ಉದಾಹರಣೆಗೆ, ಮಗು ಆಸ್ಪತ್ರೆಯಲ್ಲಿ ಜನಿಸಿದರೆ ಆಸ್ಪತ್ರೆಯ ಉಸ್ತುವಾರಿ ವೈದ್ಯಾಧಿಕಾರಿ ಜನನವನ್ನು ವರದಿ ಮಾಡಬೇಕು. ಹೊಸ ಕಾಯ್ದೆ ಪ್ರಕಾರ ಜನನದ ಸಂದರ್ಭಗಳಲ್ಲಿ, ನಿರ್ದಿಷ್ಟ ವ್ಯಕ್ತಿಗಳು ಪೋಷಕರು ಮತ್ತು ಮಾಹಿತಿದಾರರ ಆಧಾರ್ ಸಂಖ್ಯೆ ಒದಗಿಸಬಹುದು. ಅಂದರೆ ಜೈಲಿನಲ್ಲಿ ಜನನವಾದರೆ ಜೈಲರ್ ಈ ಕಾರ್ಯ ನಿರ್ವಹಿಸಬಹುದು. ಹಾಗೆಯೇ ಹೋಟೆಲ್ ಅಥವಾ ಲಾಡ್ಜ್ನಲ್ಲಿ ಜನಿಸಿದರೆ ಅಲ್ಲಿನ ಮ್ಯಾನೇಜರ್ ಅಥವಾ ಜವಾಬ್ದಾರಿಯುತ ಹುದ್ದೆಯಲ್ಲಿರುವವರು ಜನನವನ್ನು ವರದಿ ಮಾಡಬಹುದು.
ಇದನ್ನೂ ಓದಿ : I.N.D.I.A ಮೈತ್ರಿಕೂಟದಿಂದ ಸನಾತನ ಧರ್ಮ ನಾಶ ಮಾಡುವ ಹುನ್ನಾರ: ಪ್ರಧಾನಿ ಆರೋಪ