ಮುಂಬೈ:ಮಹಾರಾಷ್ಟ್ರದ ಸಾಕಿನಾಕ ಪ್ರದೇಶದಲ್ಲಿ ಸೆಪ್ಟೆಂಬರ್ 2021ರಂದು 34 ವರ್ಷದ ಮಹಿಳೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗೆ ಮುಂಬೈ ನ್ಯಾಯಾಲಯ ಮರಣದಂಡನೆ ಶಿಕ್ಷಿ ವಿಧಿಸಿದೆ. 45 ವರ್ಷದ ವ್ಯಕ್ತಿ, ರಸ್ತೆ ಬದಿ ನಿಲ್ಲಿಸಲಾಗಿದ್ದ ಟೆಂಪೊ ಒಂದರಲ್ಲಿ 34 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ್ದ. ಬಳಿಕ ಕ್ರೂರವಾಗಿ ಆಕೆಯನ್ನು ಹತ್ಯೆ ಮಾಡಿದ್ದ.
ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (ದಿಂಡೋಶಿ) ಹೆಚ್ ಸಿ ಶೆಂಡೆ ಅವರು ಆರೋಪಿ ಮೋಹನ್ ಕಥ್ವಾರು ಚೌಹಾಣ್ನನ್ನು ಐಪಿಸಿ ಸೆಕ್ಷನ್ 302 (ಕೊಲೆ), 376 (ಅತ್ಯಾಚಾರ) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಮೇ.30 ರಂದು ದೋಷಿ ಎಂದು ತೀರ್ಪು ನೀಡಿದ್ದರು. ಮಹಿಳೆಯನ್ನು ಟೆಂಪೊದಲ್ಲಿ ಕೂಡಿ ಹಾಕಿ ಅತ್ಯಾಚಾರ ನಡೆಸಿದ್ದ ಆರೋಪಿ, ಬಳಿಕ ಆಕೆಯ ಖಾಸಗಿ ಭಾಗಕ್ಕೆ ಕಬ್ಬಿಣದ ರಾಡ್ ಹಾಕಿ ಕ್ರೂರವಾಗಿ ಹಿಂಸಿಸಿದ್ದ. ಇದೊಂದು ಅಪರೂಪದ ಪ್ರಕರಣ ಎಂದು ನ್ಯಾಯಾಧೀಶರು ಹೇಳಿದ್ದರು.