ಬುರ್ಹಾನ್‌ಪುರ (ಮಧ್ಯಪ್ರದೇಶ): ಮಧ್ಯಪ್ರದೇಶದ ಬುರ್ಹಾನ್‌ಪುರ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಜಿಲ್ಲೆಯ ಡೆಡ್ತಲೈ ಗ್ರಾಮದಲ್ಲಿ 3 ವರ್ಷದ ಬಾಲಕಿ ತನ್ನ ತಂದೆಯೊಂದಿಗೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಾಳೆ. ಅತ್ಯಂತ ಕುತೂಹಲಕಾರಿ ಸಂಗತಿಯೆಂದರೆ, ಬಾಲಕಿಯು ಬೇರೆಯವರ ವಿರುದ್ಧ ದೂರು ದಾಖಲಿಸಿಲ್ಲ. ಬದಲಾಗಿ ತನ್ನ ತಾಯಿಯನ್ನೇ ಜೈಲಿಗೆ ಹಾಕುವಂತೆ ಪೊಲೀಸರಿಗೆ ಮನವಿ ಮಾಡಿದ್ದಾಳೆ.
ತಾಯಿ ವಿರುದ್ದ ದೂರು: ಭಾನುವಾರ ಮಧ್ಯಾಹ್ನ ಮಗಳಿಗೆ ಸ್ನಾನ ಮಾಡಿಸಿದ ತಾಯಿ ಮಗಳಿಗೆ ಕಾಡಿಗೆ ಹಚ್ಚುವಂತೆ ಪತಿಗೆ ಹೇಳಿದ್ದಾರೆ. ಕಾಡಿಗೆ ಹಾಕಿಸಿಕೊಳ್ಳಲು ಮಗಳು ಒಪ್ಪುತ್ತಿಲ್ಲ ಎಂದು ಪತಿ ಹೇಳಿದ್ದಾರೆ. ಆಗ ತಾಯಿ ಮಗುವಿಗೆ ಪ್ರೀತಿಯಿಂದ ಕಪಾಳಮೋಕ್ಷ ಮಾಡಿದ್ದಾರೆ. ಇದಾದ ಬಳಿಕ ಬಾಲಕಿ ಅಳಲಾರಂಬಿಸಿದ್ದಾಳೆ. ಕಷ್ಟಪಟ್ಟು ಸಮಾಧಾನಪಡಿಸಲು ಮುಂದಾದಾಗ ಅಪ್ಪಾ ಪೊಲೀಸ್ ಠಾಣೆಗೆ ದೂರು ಕೊಡೋಣಾ ಬಾ. ಇಲ್ಲದಿದ್ರೆ ಅಮ್ಮ ಕೊಲ್ಲುತ್ತಾಳೆ. ಅವಳನ್ನು ಕೂಡಲೇ ಜೈಲಿಗೆ ಹಾಕಬೇಕು ಎಂದು ಹೇಳತೊಡಗಿದ್ದಾಳೆ. ಇದನ್ನು ಕೇಳಿ ಇಬ್ಬರೂ ನಕ್ಕಿದ್ದಾರೆ. ಆದರೆ ಬಾಲಕಿ ಒಪ್ಪದ ಕಾರಣ ಠಾಣೆಗೆ ಕರೆತಂದಿದ್ದಾರೆ.