ನಾಗ್ಪುರ (ಮಹಾರಾಷ್ಟ್ರ): ನೆರೆಯ ಮಹಾರಾಷ್ಟ್ರದಲ್ಲಿ 15 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ಯೂಟ್ಯೂಬ್ ವಿಡಿಯೋ ನೋಡಿ ಹೆರಿಗೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ವೇಳೆ ಮಗು ಸಾವನ್ನಪ್ಪಿದ್ದು, ಹೆರಿಗೆಯ ನಂತರ ಭಾರಿ ರಕ್ತಸ್ರಾವ ಉಂಟಾಗಿ ಬಾಲಕಿಯ ಪ್ರಾಣ ಕೂಡ ಅಪಾಯದಲ್ಲಿದೆ ಎಂದು ವರದಿಯಾಗಿದೆ.
ನಾಗ್ಪುರ ನಗರದ ಅಂಬಾಝರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಾರ್ಚ್ 3ರಂದು ಈ ಘಟನೆ ನಡೆದಿದೆ. ಅಪ್ರಾಪ್ತ ವಯಸ್ಸಿನ ಬಾಲಕಿ ಹೆರಿಗೆ ಮಾಡಿಕೊಂಡ ಬಳಿಕ ಮಗು ಮೃತಪಟ್ಟಿದೆ. ಸದ್ಯ ಗಂಭೀರ ಸ್ಥಿತಿಯಲ್ಲಿರುವ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿ: ಸಂತ್ರಸ್ತ ಬಾಲಕಿ ಕೆಲ ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಈ ನೋವು ಹೆಚ್ಚಾಗ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ವೀಕ್ಷಿಸಿ ತನ್ನ ಮನೆಯಲ್ಲೇ ಪ್ರಸವಕ್ಕೆ ಬೇಕಾದ ಸಾಮಾಗ್ರಿಗಳನ್ನೆಲ್ಲಾ ತಾನೇ ಜೋಡಿಸಿಕೊಂಡಿದ್ದಾಳೆ. ಇದರ ನಡುವೆ ತಾಯಿ ಕೆಲಸಕ್ಕೆ ಹೋದಾಗ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ ಯೂಟ್ಯೂಬ್ ವಿಡಿಯೋಗಳನ್ನು ನೋಡುತ್ತ ಮಗುವಿಗೆ ಜನ್ಮ ನೀಡಲು ಮುಂದಾಗಿದ್ದಾಳೆ. ಆದರೆ, ಈ ಘಟನೆಯಲ್ಲಿ ಮಗು ಸಾವನ್ನಪ್ಪಿದ್ದರಿಂದ ಆ ಶವವನ್ನು ಬಚ್ಚಿಟ್ಟಿದ್ದಾರೆ. ಮತ್ತೊಂದೆಡೆ, ತಾಯಿ ಮನೆಗೆ ಹಿಂದಿರುಗಿದಾಗ ಕೊಠಡಿಯ ಎಲ್ಲೆಡೆ ರಕ್ತದ ಕಲೆಗಳು ಪತ್ತೆಯಾಗಿವೆ. ಜೊತೆಗೆ ಬಾಲಕಿಯ ಆರೋಗ್ಯವೂ ಹದಗೆಟ್ಟಿರುವುದು ಬೆಳಕಿಗೆ ಬಂದಿದೆ. ಆಗ ಬಾಲಕಿಯನ್ನು ತಾಯಿ ವಿಚಾರಿಸಿದಾಗ ಇಡೀ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿ ಸಂತೋಷ್ ಭೋಯಾನೆ ತಿಳಿಸಿದ್ದಾರೆ.