ಮುಂಬೈ (ಮಹಾರಾಷ್ಟ್ರ) :ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗಿದ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕಾನೂನು ತರಲು ಕೇಂದ್ರ ಸರ್ಕಾರ ಉದ್ದೇಶಿಸಿದ್ದರ ನಡುವೆ, ಮುಂಬೈನಲ್ಲಿ ಚಲಿಸುವ ಟ್ಯಾಕ್ಸಿಯಲ್ಲಿಯೇ 14 ವರ್ಷದ ವಿಶೇಷಚೇತನ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪ ಕೇಳಿಬಂದಿದೆ. ಕೇಸ್ಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಸೆಪ್ಟೆಂಬರ್ 18 ರಂದು ಪ್ರಕರಣ ನಡೆದಿದೆ. ಆರೋಪಿಗಳಾದ ಸಲ್ಮಾನ್ ಶೇಖ್ (26) ಮತ್ತು ಟ್ಯಾಕ್ಸಿ ಚಾಲಕ ಪ್ರಕಾಶ್ ಪಾಂಡೆ ಎಂಬ ಇಬ್ಬರನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ.
ಘಟನೆಯ ವಿವರ:ಸೆಪ್ಟೆಂಬರ್ 18 ರಂದು 14 ವರ್ಷದ ವಿಶೇಷ ಚೇತನ ಬಾಲಕಿ ತನ್ನ ಕುಟುಂಬಸ್ಥರೊಂದಿಗೆ ಜಗಳವಾಡಿ, ಕೋಪದಲ್ಲಿ ಆಕೆ ಮಾಲ್ವಾನಿಯಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಲು ನಿರ್ಧರಿಸಿದಳು. ಇದಕ್ಕಾಗಿ ಟ್ಯಾಕ್ಸಿ ಬುಕ್ ಮಾಡಿಕೊಂಡು ತೆರಳಿದ್ದಾಳೆ. ದಾರಿಯ ಮಧ್ಯೆ ಟ್ಯಾಕ್ಸಿ ಚಾಲಕ ಪ್ರಕಾಶ್ ಪಾಂಡೆ, ದಾದರ್‌ನಲ್ಲಿ ಅವನ ಪರಿಚಯಸ್ಥ ಸಲ್ಮಾನ್ ಶೇಖ್‌ನನ್ನು ಟ್ಯಾಕ್ಸಿಯಲ್ಲಿ ಹತ್ತಿಸಿಕೊಂಡು ಹೋಗಿದ್ದಾನೆ.
ದಾದರ್ ಮತ್ತು ಸಾಂತಾಕ್ರೂಜ್ ನಡುವೆ ಟ್ಯಾಕ್ಸಿ ಚಲಿಸುತ್ತಿದ್ದಾಗಲೇ ಸಲ್ಮಾನ್ ಶೇಖ್ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದುರುಳ ಬಾಲಕಿಯ ಮೇಲೆ ಕ್ರೌರ್ಯ ಮೆರೆಯುತ್ತಿದ್ದುದನ್ನು ತಡೆಯದೇ ಚಾಲಕ ಪ್ರಕಾಶ್ ಪಾಂಡೆ ಸಹಾಯ ಮಾಡಿದ್ದಾನೆ ಎಂಬ ಆರೋಪವಿದೆ. ಅತ್ಯಾಚಾರವೆಸಗಿದ ಬಳಿಕ ಬಾಲಕಿಯನ್ನು ಮಾಲ್ವಾನಿಯಲ್ಲಿ ಆಕೆಯ ಸಂಬಂಧಿಕರ ಬಳಿ ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ.