ಮುಜಾಫರ್ಪುರ(ಬಿಹಾರ):ಸಾಧನೆ ಮಾಡಬೇಕೆಂಬ ಛಲ, ಹುಮ್ಮಸ್ಸು ಇದ್ದರೆ ಯಾವ ವಯಸ್ಸಿನಲ್ಲಾದರೂ ಸಾಧಿಸಬಹುದು. ಈಗಾಗಲೇ ಇಂತಹ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದಿವೆ. ಇದೀಗ ನಾವು ಹೇಳಹೊರಟಿರುವ ಸ್ಟೋರಿಯೂ ಸಹ ಅಂತಹ ಸಾಧಕನಿಗೆ ಸೇರಿದ್ದಾಗಿದೆ. ಇಲ್ಲೊಬ್ಬ ಕೇವಲ 13ನೇ ವಯಸ್ಸಿನಲ್ಲಿ ಬರೋಬ್ಬರಿ 56 ಸ್ಟಾರ್ಟ್ ಅಪ್ ಕಂಪನಿಗಳು ಸಿಇಒ ಆಗಿ ಕೆಲಸ ಮಾಡ್ತಿದ್ದಾನೆ ಅಂದ್ರೆ ನಂಬ್ತೀರಾ?.
ಬಿಹಾರದ ಮುಜಾಫರ್ಪುರದ ಸೂರ್ಯಾಂಶ್ ಕುಮಾರ್ ಕೇವಲ 13ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಾರೆ. ಕೇವಲ ಒಂದು ವರ್ಷದಲ್ಲಿ ಇಷ್ಟೊಂದು ಸ್ಟಾರ್ಟ್ ಅಪ್ ಕಂಪನಿ ಹುಟ್ಟುಹಾಕುವ ಮೂಲಕ ತಮ್ಮ ಪೋಷಕರ ಹೆಸರನ್ನು ಉತ್ತುಂಗಕ್ಕೇರಿಸಿದ್ದಾರೆ. ಜಿಲ್ಲೆಯ ಕತ್ರಾ ಬ್ಲಾಕ್‌ನ ಅಮ್ಮಾ ಗ್ರಾಮದಲ್ಲಿ ವಾಸವಾಗಿರುವ ಸೂರ್ಯಾಂಶ್ ಒಂಬತ್ತನೇ ತರಗತಿಯಲ್ಲಿದ್ದಾಗ ಮೊದಲ ಕಂಪನಿ ಆರಂಭಿಸಿದ್ದಾರೆ. ಇದೀಗ 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದು, 56 ಕಂಪನಿಗಳ ಸಿಇಒ ಆಗಿ ಕೆಲಸ ಮಾಡ್ತಿದ್ದಾರೆ. ದಿನಕ್ಕೆ 17 ರಿಂದ 18 ಗಂಟೆಗಳ ಕಾಲ ಕೆಲಸ ಮಾಡುವ ಇವರು ವಿಶ್ವದ ಅತ್ಯಂತ ಕಿರಿಯ ಸಿಇಒ ಕೂಡಾ ಹೌದು.
ಈ ಆಲೋಚನೆ ಬಂದಿದ್ದು ಹೇಗೆ?: ಆನ್ಲೈನ್ನಲ್ಲಿ ಕೆಲವೊಂದು ವಸ್ತುಗಳನ್ನು ಹುಡುಕುತ್ತಿದ್ದಾಗ ಕಂಪನಿ ತೆರೆಯಬೇಕು ಎಂಬ ಆಲೋಚನೆ ಬಂತು. ಇದಕ್ಕೆ ಸಂಬಂಧಿಸಿದಂತೆ ತಂದೆಯ ಮುಂದೆ ಹೇಳಿಕೊಂಡೆ. ನನಗೆ ಅವರು ಪ್ರೋತ್ಸಾಹ ನೀಡಿದರು. ಆರ್ಡರ್ ಮಾಡುವ ಯಾವುದೇ ಸರಕು 30 ನಿಮಿಷದೊಳಗೆ ಜನರ ಮನೆಗಳಿಗೆ ತಲುಪಿಸುವುದು ಇದರ ಉದ್ದೇಶ ಎಂದು ಅವರು ವಿವರಿಸಿದರು.