ಮಲಪ್ಪುರಂ (ಕೇರಳ): ನೆರೆಯ ಕೇರಳದಲ್ಲಿ 114 ವರ್ಷದ ನಿಲಂಬೂರ್ ತೇಗ (ಸಾಗುವಾನಿ ಅಥವಾ ಟೀಕ್ ವುಡ್) ಮರವೊಂದು 39.29 ಲಕ್ಷ ರೂಪಾಯಿಗೆ ಹರಾಜಿನಲ್ಲಿ ಮಾರಾಟವಾಗಿದೆ. ಇದು ಅರಣ್ಯ ಇಲಾಖೆಯ ಇತಿಹಾಸದಲ್ಲೇ ಅತ್ಯಧಿಕ ಬೆಲೆಗೆ ಮಾರಾಟವಾದ ಸಾರ್ವಕಾಲಿಕ ದಾಖಲೆ ಎಂದು ಪರಿಗಣಿಸಲಾಗಿದೆ. ತಿರುವನಂತಪುರಂ ಮೂಲದ ಅಜೀಶ್ ಎಂಬುವವರು ಇಷ್ಟೊಂದು ಬೆಲೆಗೆ ಮರದ ಮೂರು ತಂಡುಗಳನ್ನು ಖರೀದಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ನಿಲಂಬೂರಿನ ಅರಣ್ಯ ಇಲಾಖೆಯ ಅರುವಕೊಡೆ ನೆಡುಂಕಯಂ ಡಿಪೋಗಳಲ್ಲಿ ನಡೆಯುವ ಇ-ಹರಾಜಿನಲ್ಲಿ ಇವರು ಭಾಗವಹಿಸುತ್ತಿದ್ದಾರೆ.
ಬ್ರಿಟಿಷರು ನೆಟ್ಟಿದ್ದರು: ರಾಜ್ಯದ ಸಂರಕ್ಷಿತ ಪ್ರದೇಶದಲ್ಲಿ 1909ರಲ್ಲಿ ಬ್ರಿಟಿಷ್ ಅಧಿಕಾರಿಗಳು ಈ ಸಾಗುವಾನಿ ಗಿಡ ನೆಟ್ಟಿದ್ದರು. ಹೆಮ್ಮರವಾಗಿ ಬೆಳೆದು ಒಣಗಿ ಬಿದ್ದ ನಂತರ ಫೆಬ್ರವರಿ 10ರಂದು ನೆಡುಂಕಯಂ ಡಿಪೋದಲ್ಲಿ ಇದರ ಮೂರು ತುಂಡುಗಳನ್ನು ಹರಾಜಿಗೆ ಕರೆಯಲಾಗಿತ್ತು. ಈ ತುಂಡುಗಳು ಸುಮಾರು ಎಂಟು ಘನ ಮೀಟರ್ ಇದ್ದವು.
ಹರಾಜಿನಲ್ಲಿ ಮರದ ತುಂಡುಗಳಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಒಂದು ತುಂಡು 23 ಲಕ್ಷ ರೂಪಾಯಿಗೆ ಹರಾಜಾದರೆ, ಇತರ ತಂಡುಗಳು ಕ್ರಮವಾಗಿ 11 ಲಕ್ಷ ರೂ. ಮತ್ತು 5.25 ಲಕ್ಷ ರೂಪಾಯಿಗೆ ಮಾರಾಟವಾಗಿವೆ. ಒಣಗಿದ ಮರದಿಂದ ಸರ್ಕಾರದ ಬೊಕ್ಕಸಕ್ಕೆ 39.25 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.