ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವನ್ನಪ್ಪಿದೆ. ಇದರೊಂದಿಗೆ ಮಾರ್ಚ್ ತಿಂಗಳಿಂದ ಇದುವರೆಗೆ ಮೃತಪಟ್ಟ ಚೀತಾಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. "ಇಂದು ಬೆಳಗ್ಗೆ ಹೆಣ್ಣು ಚೀತಾಗಳಲ್ಲಿ ಒಂದಾದ ಧಾತ್ರಿ ಶವವಾಗಿ ಪತ್ತೆಯಾಗಿದೆ. ಇದರ ಸಾವಿನ ಕಾರಣ ತಿಳಿಯಲು ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತಿದೆ'' ಎಂದು ರಾಜ್ಯ ಅರಣ್ಯ ಇಲಾಖೆ ತಿಳಿಸಿದೆ.
ಚೀತಾ ಯೋಜನೆಯಡಿಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಎರಡು ಬ್ಯಾಚ್‌ಗಳಲ್ಲಿ ಒಟ್ಟು 20 ಚೀತಾಗಳನ್ನು ತರಿಸಿಕೊಳ್ಳಲಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಐದು ಹೆಣ್ಣು ಮತ್ತು ಮೂರು ಗಂಡು ಸೇರಿ ಎಂಟು ಚೀತಾಗಳು ಹಾಗೂ ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ 12 ಚೀತಾಗಳನ್ನು ಸ್ಥಳಾಂತರ ಮಾಡಲಾಗಿದೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ಇರಿಸಲಾಗಿದೆ.
ಇದನ್ನೂ ಓದಿ:Cheetah death: ಕುನೋ ಅರಣ್ಯದಲ್ಲಿ ಚೀತಾಗಳ ಸಾವಿನ ಕಾರಣ, ಪರಿಹಾರಕ್ಕಾಗಿ ವಿದೇಶಿ ತಜ್ಞರ ಮೊರೆ
ಕಳೆದ ತಿಂಗಳಷ್ಟೇ ಎರಡು ಚೀತಾಗಳು ಮೃತಪಟ್ಟಿದ್ದವು. ಕುತ್ತಿಗೆಗೆ ಕಟ್ಟಿದ ರೇಡಿಯೋ ಕಾಲರ್‌ಗಳಿಂದ ಉಂಟಾದ ಗಾಯಗಳ ಸೋಂಕಿನಿಂದ ಈ ಚೀತಾ ಸಾವನ್ನಪ್ಪಿದ್ದವು. ಆದಾಗ್ಯೂ, ಎಲ್ಲ ಚೀತಾಗಳು ಸಾವುಗಳು ನೈಸರ್ಗಿಕ ಕಾರಣಗಳಿಂದ ಸಂಭವಿಸಿವೆ ಎಂದು ಪರಿಸರ ಸಚಿವಾಲಯ ಹೇಳಿತ್ತು. ಚೀತಾ ಮರುಪರಿಚಯ ಯೋಜನೆಯಲ್ಲಿ ತೊಡಗಿಸಿಕೊಂಡಿರುವ ತಜ್ಞರು ಪ್ರಕಾರ, ಭಾರೀ ಮಳೆ, ವಿಪರೀತ ಶಾಖ ಮತ್ತು ತೇವಾಂಶವು ಚೀತಾಗಳಿಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಚೀತಾಗಳ ಕುತ್ತಿಗೆಯ ಸುತ್ತ ಅಳವಡಿಸಲಾಗಿರುವ ರೇಡಿಯೋ ಕಾಲರ್‌ಗಳು ಹೆಚ್ಚುವರಿ ತೊಡಕುಗಳನ್ನು ಉಂಟು ಮಾಡುತ್ತವೆ ಎಂದು ಹೇಳಿದ್ದಾರೆ.
ಮಾರ್ಚ್‌ನಲ್ಲಿ ನಮೀಬಿಯಾದ ಚೀತಾ ಜ್ವಾಲಾಗೆ ನಾಲ್ಕು ಮರಿಗಳು ಜನಿಸಿದವು. ಆದರೆ, ನಾಲ್ಕು ಮರಿಗಳ ಪೈಕಿ ಮೂರು ಚೀತಾಗಳು ಮೇ ತಿಂಗಳಲ್ಲಿ ಮೃತಪಟ್ಟಿದ್ದರು. ಜುಲೈ 11ರಂದು ಕಾದಾಟ ಕಾರಣದಿಂದ ತೇಜಸ್ ಎಂಬ ಗಂಡು ಚಿರತೆ ಶವವಾಗಿ ಪತ್ತೆಯಾಗಿತ್ತು. ಜುಲೈ 14ರಂದು ಮತ್ತೊಂದು ಗಂಡು ಚಿರತೆ ಸೂರಜ್ ಕಳೇಬರ ಪತ್ತೆಯಾಗಿತ್ತು. ಇದಕ್ಕೂ ಮೊದಲು ನಮೀಬಿಯಾದ ಚೀತಾಗಳಲ್ಲಿ ಒಂದಾದ ಸಾಶಾ ಮಾರ್ಚ್ 27ರಂದು ಕಿಡ್ನಿ ಸಂಬಂಧಿತ ಕಾಯಿಲೆಗೆ ಬಲಿಯಾಗಿತ್ತು. ಅಲ್ಲದೇ, ದಕ್ಷಿಣ ಆಫ್ರಿಕಾದ ಚೀತಾ ಉದಯ್ ಏಪ್ರಿಲ್ 13ರಂದು ಮೃತಪಟ್ಟಿತ್ತು. ದಕ್ಷಿಣ ಆಫ್ರಿಕಾದ ಮತ್ತೊಂದು ದಕ್ಷ ಎಂಬ ಚೀತಾ ಮೇ 9ರಂದು ಗಾಯಗೊಂಡು ಸಾವನ್ನಪ್ಪಿತ್ತು.
ಚೀತಾಗಳು ಸರಣಿ ಸಾವಿನ ಬಗ್ಗೆ ಸುಪ್ರೀಂ ಕೋರ್ಟ್ ಸಹ ಕಳವಳ ವ್ಯಕ್ತಪಡಿಸಿತ್ತು. ಜುಲೈ 20ರಂದು ವಿಚಾರಣೆ ನಡೆಸಿದ್ದ ಸರ್ವೋಚ್ಛ ನ್ಯಾಯಾಲಯವು, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಒಂದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಎಂಟು ಚೀತಾಗಳು ಸತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಹೇಳಿತ್ತು. ಅಲ್ಲದೇ, ಇದನ್ನು ಪ್ರತಿಷ್ಠೆಯ ವಿಷಯವಾಗಿ ಪರಿಗಣಿಸಬೇಡಿ ಮತ್ತು ವಿವಿಧ ಅಭಯಾರಣ್ಯಗಳಿಗೆ ಚೀತಾಗಳನ್ನು ಸ್ಥಳಾಂತರಿಸುವುದು ಸೇರಿ ಇತರ ಸಾಧ್ಯತೆಗಳ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಸೂಚಿಸಿತ್ತು.
ಇದನ್ನೂ ಓದಿ:ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು: 7ಕ್ಕೇರಿದ ಸಾವಿನ ಸಂಖ್ಯೆ!