ಕಾನ್ಪುರ: ತಿಂಗಳ ಹಿಂದಿನಿಂದ ಶುರುವಾಗಿರುವ ವಿಪರೀತ ಮಂಜು ಕೂಡಿದ ಚಳಿ ಮೆಲ್ಲನೆ ನೂರಾರು ಜನರ ಪ್ರಾಣವನ್ನು ಆಪೋಶನ ತೆಗೆದುಕೊಳ್ಳುತ್ತಿದೆ. ಮರಗಟ್ಟುವ ಚಳಿಯಿಂದಾಗಿ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕಳೆದ ಐದು ದಿನಗಳಲ್ಲಿ 98 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ, ವೈದ್ಯರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕಾನ್ಪುರದಲ್ಲಿ ವರದಿಯಾದ 98 ಸಾವುಗಳಲ್ಲಿ 44 ಜನರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದರೆ, 54 ರೋಗಿಗಳು ಚಿಕಿತ್ಸೆಗೆ ಮುಂಚೆಯೇ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿಯನ್ನು L.P.S ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ನೀಡಿದೆ. ಲಕ್ಷ್ಮೀಪತ್ ಸಿಂಘಾನಿಯಾ ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿ ಮತ್ತು ಕಾರ್ಡಿಯಾಕ್ ಸರ್ಜರಿ ಬಿಡುಗಡೆ ಮಾಡಿದ ಮಾಹಿತಿಯಂತೆ, ಕಳೆದೊಂದು ವಾರದಲ್ಲಿ 723 ಹೃದ್ರೋಗಿಗಳು ಆಸ್ಪತ್ರೆಯ ತುರ್ತು ನಿಗಾ ಘಟಕ ಮತ್ತು ಹೊರರೋಗ ವಿಭಾಗದಲ್ಲಿ ದಾಖಲಾಗಿದ್ದಾರೆ.
ಆಘಾತಕಾರಿ ಸಂಗತಿ ಏನೆಂದರೆ, ತೀವ್ರ ಶೀತದಿಂದ ಬಳಲುತ್ತಿರುವ ಹದಿನಾಲ್ಕು ರೋಗಿಗಳು ಹೃದಯಾಘಾತದಿಂದ ಶನಿವಾರ ಮೃತಪಟ್ಟರೆ, ಹೃದ್ರೋಗ ಸಂಸ್ಥೆಯಲ್ಲಿ ಚಿಕಿತ್ಸೆ ವೇಳೆ ಆರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, ಇನ್‌ಸ್ಟಿಟ್ಯೂಟ್ ಆಫ್ ಕಾರ್ಡಿಯಾಲಜಿಗೆ, ಮೊದಲೇ ಈ ಹೃದಯಾಘಾತದಿಂದ ಸಾವನ್ನಪ್ಪಿದ 8 ಜನ ರೋಗಿಗಳನ್ನು ಕರೆತರಲಾಗಿತ್ತು. ಕಳೆದ 24 ಗಂಟೆಯಲ್ಲಿ ನಗರದ ಎಸ್‌ಪಿಎಸ್ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 14 ರೋಗಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮುಖ್ಯವಾಗಿ ಹೃದ್ರೋಗ ಸಂಸ್ಥೆಯಲ್ಲಿ ಒಟ್ಟು 604 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ 54 ಹೊಸ ಮತ್ತು 27 ಹಳೆಯ ರೋಗಿಗಳು ಸೇರಿದ್ದಾರೆ.