ನವದೆಹಲಿ :ಪ್ರಪಂಚದಾದ್ಯಂತ ತನ್ನ ಅಟ್ಟಹಾಸ ಮೆರೆದು ಒಂದು ವರ್ಷದ ಬಳಿಕ ಇಂಗ್ಲೆಂಡ್ನಲ್ಲಿ ಹೊಸ ರೂಪ ತಾಳಿರುವ ಕೊರೊನಾ ವೈರಸ್ ಭಾರತದಲ್ಲಿ ಮತ್ತೆ ಆರು ಜನರಲ್ಲಿ ಪತ್ತೆಯಾಗಿದೆ. ದೇಶದಲ್ಲಿನ ರೂಪಾಂತರ ಕೋವಿಡ್ ಪ್ರಕರಣಗಳ ಸಂಖ್ಯೆ 96ಕ್ಕೆ ಏರಿಕೆಯಾಗಿದೆ.
ಎಲ್ಲ 96 ಸೋಂಕಿತರನ್ನು ಆರೋಗ್ಯ ಕೇಂದ್ರದಲ್ಲಿ ಒಂದೇ ಕೋಣೆಯಲ್ಲಿ ಐಸೋಲೇಷನ್ನಲ್ಲಿರಿಸಲಾಗಿದೆ. ಅವರ ಸಂಪರ್ಕಕ್ಕೆ ಬಂದವರನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇಂಗ್ಲೆಂಡ್ನಲ್ಲಿ ಹೊಸ ಪ್ರಬೇಧದ ಕೋವಿಡ್ ವೈರಸ್ ಪತ್ತೆಯಾದ ಹಿನ್ನೆಲೆ ಡಿಸೆಂಬರ್ 23ರಿಂದ ಜನವರಿ 7ರವರೆಗೆ ಭಾರತ ಹಾಗೂ ಯುಕೆ ನಡುವೆ ವಿಮಾನ ಹಾರಾಟ ಸ್ಥಗಿತಗೊಳಿಸಲಾಗಿತ್ತು.
ಜನವರಿ 8ರಿಂದ ಮತ್ತೆ ಉಭಯ ರಾಷ್ಟ್ರಗಳ ನಡುವೆ ವಿಮಾನ ಸೇವೆ ಪುನಾರಂಭಗೊಂಡಿದೆ. ಬ್ರಿಟನ್ನಿಂದ ಬರುವ ಪ್ರಯಾಣಿಕರನ್ನು ವಿಮಾನ ನಿಲ್ದಾಣಗಳಲ್ಲೇ ಆರ್ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಇದನ್ನೂ ಓದಿ: ವ್ಯಾಕ್ಸಿನ್ ಖರೀದಿ ಒಪ್ಪಂದಕ್ಕೆ ಕೇಂದ್ರದಿಂದ ಸಹಿ: ಕೊವಿಶೀಲ್ಡ್ ಪ್ರತಿ ಡೋಸ್ಗೆ 200 ರೂ. ನಿಗದಿ
ಪುಣೆಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ (NIV), ಬೆಂಗಳೂರಿನ ನಿಮ್ಹಾನ್ಸ್, ದೆಹಲಿಯ ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ (IGIB) ಹಾಗೂ ಹೈದರಾಬಾದ್ನ ಪ್ರಯೋಗಾಲಯ ಸೇರಿದಂತೆ ದೇಶದಾದ್ಯಂತ ಒಟ್ಟು 10 ಲ್ಯಾಬ್ಗಳಲ್ಲಿ ಬ್ರಿಟನ್ ಸೋಂಕು ಪತ್ತೆ ಹಚ್ಚಲು ಪರೀಕ್ಷೆ ನಡೆಸಲಾಗುತ್ತಿದೆ.
ಕೊವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಜನವರಿ 16ರಿಂದ ದೇಶಾದ್ಯಂತ ವಿತರಿಸಲು ಭಾರತ ಸಜ್ಜಾಗಿದ್ದು, ಜನರು ಮಹಾಮಾರಿಯಿಂದ ಭಯಮುಕ್ತರಾಗಿದ್ದಾರೆ.