ಚಂಡೀಗಢ(ಪಂಜಾಬ್): ಏನಾದ್ರೂ ಸಾಧನೆ ಮಾಡ್ಬೇಕು ಅಂದ್ರೆ ವಯಸ್ಸು ಮುಖ್ಯವಲ್ಲ. ಉತ್ಸಾಹ, ಹುಮ್ಮಸ್ಸು ಇರಬೇಕು. ದೇಹಕ್ಕೆ ವಯಸ್ಸಾದ್ರೂ ಕೂಡ ನಾವು ಅದುಕೊಂಡಿದ್ದನ್ನು ಸುಲಭವಾಗಿ ಸಾಧಿಸಬಹುದು. ಅಂತವರಿಗೆ ಈ 94 ವರ್ಷದ ವೃದ್ಧೆ ಮಾದರಿಯಾಗ್ತಾರೆ. ಚಂಡೀಗಢದಲ್ಲಿ ನೆಲೆಸಿರುವ 94 ವರ್ಷದ ವೃದ್ಧೆ ಹರ್ಭಜನ್ ಕೌರ್ ತಮ್ಮ 90ನೇ ವಯಸ್ಸಿನಲ್ಲಿ ಬ್ಯುಸಿನೆಸ್ ಆರಂಭಿಸಿ, ಇದೀಗ ಪ್ರತಿ ತಿಂಗಳು ಲಕ್ಷ ಲಕ್ಷ ರೂಪಾಯಿ ಗಳಿಕೆ ಮಾಡ್ತಿದ್ದಾರೆ.
90ನೇ ವಯಸ್ಸಿನಲ್ಲಿ ಬ್ಯುಸಿನೆಸ್ ಆರಂಭಿಸಿದ ವೃದ್ಧೆ, ತಿಂಗಳಿಗೆ ಲಕ್ಷಗಟ್ಟಲೆ ಸಂಪಾದನೆ ವೃದ್ಧಾಪ್ಯದ ಸಮಯದಲ್ಲಿ ಅನೇಕರು ದೇವಸ್ಥಾನ ಅಲೆದಾಡುವುದು, ಚಿಕ್ಕ ಮಕ್ಕಳೊಂದಿಗೆ ಕಾಲ ಕಳೆಯುತ್ತಾ ತಮ್ಮ ಕೊನೆ ಕಾಲದ ಸಮಯ ಕಳೆಯುತ್ತಾರೆ. ಆದರೆ, ಇಲ್ಲೋರ್ವ ವೃದ್ಧೆ ಕಳೆದ ನಾಲ್ಕು ವರ್ಷಗಳ ಹಿಂದೆ ಅಂದರೆ ತಮ್ಮ 90ನೇ ವಯಸ್ಸಿನಲ್ಲಿ ಬರ್ಫಿ ತಯಾರಿಸುವ ಉದ್ಯೋಗ ಆರಂಭಿಸಿ, ಇದೀಗ ಅದರಲ್ಲಿ ಯಶ ಸಾಧಿಸಿದ್ದಾರೆ. ಇದೀಗ ಚಂಡೀಗಢನಲ್ಲಿ ಇವರು ತಯಾರಿಸುವ ಬರ್ಫಿ ಬ್ರಾಂಡ್ ಆಗಿ ಮಾರ್ಪಟ್ಟಿದೆ. ಹರ್ಭಜನ್ ಕೌರ್ ಬೆಸನ್ ಕಿ ಬರ್ಫಿಗೆ ಇನ್ನಿಲ್ಲದ ಬೇಡಿಕೆ ಇದೆ.
ಹರ್ಭಜನ್ ಕೌರ್ ಬೇಳೆ ಹಿಟ್ಟಿನಿಂದ ಬರ್ಫಿ ತಯಾರಿಸುವ ಮೂಲಕ ತಮ್ಮ ವ್ಯಾಪಾರ ಆರಂಭ ಮಾಡಿದ್ದರು. ಇದೀಗ ಉಪ್ಪಿನಕಾಯಿ, ಅನೇಕ ವಿಧದ ಚಟ್ನಿಗಳು ಮತ್ತು ತಂಪ್ಪು ಪಾನೀಯ ಸಹ ತಯಾರಿಸುತ್ತಿದ್ದು, ಸಾಕಷ್ಟು ಬೇಡಿಕೆ ಇದೆ. ಇದಕ್ಕೆ ಸಂಬಂಧಿಸಿದಂತೆ ಈಟಿವಿ ಭಾರತ್ ಜೊತೆ ಮಾತನಾಡಿರುವ ಹರ್ಭಜನ್ ಕೌರ್, 94ನೇ ವಯಸ್ಸಿಗೆ ಕಾಲಿಟ್ಟಿದ್ದೇನೆ. ಸ್ವಂತ ಕೆಲಸ ಮಾಡ್ಬೇಕು ಎಂಬ ಆಸೆ ನನ್ನಲ್ಲಿತ್ತು. ಆದರೆ ಕುಟುಂಬದ ಜವಾಬ್ದಾರಿ ಇದ್ದ ಕಾರಣ ಸಾಧ್ಯವಾಗಿರಲಿಲ್ಲ. ಜೊತೆಗೆ ಒಂದು ರೂಪಾಯಿ ಸಹ ಸಂಪಾದನೆ ಮಾಡಿರಲಿಲ್ಲ. ಒಂದಿಷ್ಟು ಹಣವನ್ನು ಸ್ವಂತ ದುಡಿಮೆಯಿಂದಲೇ ಸಂಪಾದಿಸಬೇಕು ಎಂದುಕೊಂಡಿದ್ದೆ. ಇದೀಗ ಅದರಲ್ಲಿ ಯಶಸ್ಸು ಕಂಡಿದ್ದೇನೆ ಎಂದರು.
ಬರ್ಫಿ ತಯಾರಿಸುವ 94 ವರ್ಷದ ವೃದ್ಧೆ ಸ್ಟಾರ್ಟ್ ಅಪ್ ಶುರುವಾಗಿದ್ದು ಹೇಗೆ?: ತಾಯಿಯ ವಯಸ್ಸು ನೋಡಿದ ಹರ್ಭಜನ್ ಕೌರ್ ಮಗಳು ರವೀನಾ, ಒಂದು ದಿನ ನೀವು ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನೆ ಮಾಡ್ತಾರೆ. ಈ ವೇಳೆ ನೀವು ಮಾಡಲು ಸಾಧ್ಯವಾಗದ ಕೆಲಸ ಮಾಡಲು ಹೋಗುತ್ತಿದ್ದೇನೆ ಎನ್ನುತ್ತಾರೆ. ಜೊತೆಗೆ ಬೇಳೆ ಹಿಟ್ಟಿನ ಬರ್ಫಿ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ಈ ವೇಳೆ ರವೀನಾ ಯಾರಾದ್ರೂ ಬರ್ಫಿ ಖರೀದಿ ಮಾಡ್ತಾರಾ? ಎಂದು ಗೇಲಿ ಮಾಡ್ತಾರೆ. ಕೆಲವೊಂದಿಷ್ಟು ದಿನ ಮಾರುಕಟ್ಟೆಯಲ್ಲಿ ಜನರಿಗೆ ಉಚಿತವಾಗಿ ಬರ್ಫಿ ನೀಡಲಾಗಿದ್ದು, ಇದು ಫೇಮಸ್ ಆಗ್ತಿದ್ದಂತೆ ಆರ್ಡರ್ ಬರಲು ಶುರುವಾಗುತ್ತವೆ. ಈ ಮೂಲಕ ಉದ್ಯಮ ಶುರುವಾಗ್ತದೆ.
ಆನಂದ್ ಮಹೀಂದ್ರಾ ಮೆಚ್ಚುಗೆ: ಹರ್ಭಜನ್ ಕೌರ್ ಅವರ ಬ್ರ್ಯಾಂಡ್ಗೆ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಮೆಚ್ಚುಗೆ ವ್ಯಕ್ತಪಡಿಸಿ, ಈ ಹಿಂದೆ ಟ್ವೀಟ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಕೋವಿಡ್ ಸಂದರ್ಭದಲ್ಲೂ ನಾವು ಜನರಿಂದ ಹೆಚ್ಚಿನ ಆರ್ಡರ್ ಪಡೆದುಕೊಂಡಿದ್ದು, ಇದೀಗ 450 ಗ್ರಾಮ್ ಪ್ಯಾಕಿಂಗ್ಗೆ 550ರೂ ಪಡೆದುಕೊಳ್ಳುತ್ತೇವೆ ಎಂದಿದ್ದಾರೆ. ಇದೀಗ ಬೇಳೆ ಹಿಟ್ಟಿನ ಬರ್ಫಿ ಜೊತೆಗೆ ಬಾದಾಮಿ ಎಣ್ಣೆ, ಸೋರೆಕಾಯಿ ಐಸ್ ಕ್ರೀಮ್, ಟೊಮೆಟೋ ಚಟ್ನಿ, ಪಾಯಸ, ಉಪ್ಪಿನಕಾಯಿ ತಯಾರಿಕೆ ಮಾಡುತ್ತಿದ್ದು, ಸಾವಯವ ಬರ್ಫಿಗೆ ಗ್ರಾಹಕರಿಗೆ ಹೆಚ್ಚು ಪ್ರಿಯವಾಗಿದೆ.