ನವದೆಹಲಿ: ಸೆಪ್ಟೆಂಬರ್ 15ರಿಂದ ನವೆಂಬರ್ 7ರವರೆಗಿನ ಅವಧಿಯಲ್ಲಿ ಒಟ್ಟು 22,644 ಹುಲ್ಲು ಸುಡುವ ಘಟನೆಗಳು ನಡೆದಿವೆ. ಈ ಪೈಕಿ 93 ಪಂಜಾಬ್ ಮತ್ತು ಶೇ 7 ರಷ್ಟು ಹರಿಯಾಣದಲ್ಲಿ ವರದಿಯಾಗಿದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವೆ. ದೆಹಲಿ-ಎನ್‌ಸಿಆರ್‌ನಲ್ಲಿ ಎದುರಾಗಿರುವ ವಾಯು ತುರ್ತುಸ್ಥಿತಿ ಕುರಿತು ಈ ವಾರ ಸುಪ್ರೀಂ ಕೋರ್ಟ್ ಹೊರಡಿಸಿದ ನಿರ್ದೇಶನಗಳ ಅನುಷ್ಠಾನಕ್ಕೆ ಅಗತ್ಯವಿರುವ ಕ್ರಮಗಳ ಬಗ್ಗೆ ಚರ್ಚಿಸಲು ಗುರುವಾರ, ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ರಾಜ್ಯ ಸರ್ಕಾರಗಳ ಜೊತೆಗೆ ತುರ್ತು ಸಭೆ ನಡೆಯಿತು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ದೆಹಲಿಯ ಎನ್‌ಸಿಟಿಯ ಮುಖ್ಯ ಕಾರ್ಯದರ್ಶಿಗಳು ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.
ವಾಯು ಗುಣಮಟ್ಟ ನಿರ್ವಹಣಾ ಆಯೋಗದ (ಸಿಎಕ್ಯೂಎಂ) ಅಧ್ಯಕ್ಷರು ಮತ್ತು ಪರಿಸರ ಮತ್ತು ಅರಣ್ಯ, ಕೃಷಿ, ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಸಚಿವಾಲಯಗಳ ಕಾರ್ಯದರ್ಶಿಗಳೂ ಇದ್ದರು. "ಸಿಎಕ್ಯೂಎಂ ಒದಗಿಸಿದ ದತ್ತಾಂಶ ಮತ್ತು ರಾಜ್ಯ ಸರ್ಕಾರಗಳು ಒದಗಿಸಿದ ಮಾಹಿತಿ ಆಧಾರದ ಮೇಲೆ, ಪ್ರಸ್ತುತ ಬಿಕ್ಕಟ್ಟಿನ ಪರಿಸ್ಥಿತಿಗೆ ಮುಖ್ಯವಾಗಿ ಹುಲ್ಲು ಸುಡುವಿಕೆ ಕಾರಣ ಎಂದು ತಿಳಿದು ಬಂದಿದೆ. ನ.8ರಂದು ಅಪಾರ ಪ್ರಮಾಣದ ಹುಲ್ಲು ಸುಡುವಿಕೆಯಿಂದ ವಾಯು ಮಾಲಿನ್ಯದ ಮಟ್ಟ ಶೇ.38ರಷ್ಟು ಹೆಚ್ಚಾಗಲು ಕಾರಣವಾಗಿದೆ. ಸೆಪ್ಟೆಂಬರ್ 5ರಿಂದ ನವೆಂಬರ್ 7ರವರೆಗಿನ ಅವಧಿಯಲ್ಲಿ ಒಟ್ಟು 22,644 ಹುಲ್ಲು ಸುಡುವ ಘಟನೆಗಳು ವರದಿಯಾಗಿವೆ. ಅದರಲ್ಲಿ 20,978 (ಶೇ.93) ಪಂಜಾಬ್‌ನಲ್ಲಿ ಮತ್ತು 1,605 (ಶೇ.7) ಪ್ರಕರಣಗಳು ಹರಿಯಾಣದಲ್ಲಿ ನಡೆದಿವೆ'' ಎಂದು ಮೂಲಗಳು ಹೇಳಿವೆ.
''ಹರಿಯಾಣದಲ್ಲಿ ಕೊಯ್ಲು ಶೇ 90ಕ್ಕಿಂತ ಹೆಚ್ಚು ಪೂರ್ಣಗೊಂಡಿದೆ. ಆದರೆ, ಪಂಜಾಬ್‌ನಲ್ಲಿ ಶೇ 60 ಪೂರ್ಣಗೊಂಡಿದೆ. ಉಳಿದಿರುವ ಕೊಯ್ಲು ಮಾಡುವ ಸಮಯದಲ್ಲಿ, ವಿಶೇಷವಾಗಿ ಪಂಜಾಬ್‌ನಲ್ಲಿ ಮತ್ತಷ್ಟು ಹಲ್ಲು ಸುಡುವಿಕೆಯನ್ನು ಪರಿಶೀಲಿಸಲು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ'' ಎನ್ನುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ವಿವರವಾದ ಚರ್ಚೆಯ ನಂತರ, ಕ್ಯಾಬಿನೆಟ್ ಕಾರ್ಯದರ್ಶಿ ಪಂಜಾಬ್ ಸರ್ಕಾರಕ್ಕೆ ಈ ಸುಗ್ಗಿಯ ಋತುವಿನ ಉಳಿದ ದಿನಗಳಲ್ಲಿ ಹುಲ್ಲು ಸುಡುವುದನ್ನು ತಡೆಯಲು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದರು ಎಂದು ಗೊತ್ತಾಗಿದೆ.