ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ 5 ರೂಪಾಯಿ ಮತ್ತು 10 ರೂಪಾಯಿ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಜನತೆಗೆ ದೀಪಾವಳಿ ಕೊಡುಗೆ ನೀಡಿದೆ.
ಕೇಂದ್ರ ಸರ್ಕಾರ ಈ ಘೋಷಣೆ ಮಾಡುತ್ತಿದ್ದಂತೆ ಬಿಜೆಪಿ ಆಡಳಿತ 9 ರಾಜ್ಯಗಳಲ್ಲೂ ತೆರಿಗೆ ಕಡಿತಗೊಳಿಸಲು ಸರ್ಕಾರ ನಿರ್ಧರಿಸಿವೆ. ಇದರಿಂದಾಗಿ ತೈಲ ದರ ಇಳಿಕೆಯಾಗಲಿದ್ದು, ಹಲವು ಕಡೆ ಲೀಟರ್‌ಗೆ 100 ರೂಪಾಯಿಗಿಂತಲೂ ಕೆಳಗಿಳಿಯಲಿದೆ.
ಪ್ರಮುಖವಾಗಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 103.97 ಮತ್ತು ಡೀಸೆಲ್ ದರ 86.67ಕ್ಕೆ ಇಳಿದಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 109.98 ಹಾಗೂ ಡೀಸೆಲ್ 94.14 ರೂಪಾಯಿಯಾಗಿದೆ. ಕೋಲ್ಕತ್ತಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ದರ ಕ್ರಮವಾಗಿ 104.67 ಮತ್ತು 89.79 ರೂಪಾಯಿಯಾಗಿದೆ.
ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಅಬಕಾರಿ ಸುಂಕದ ಜೊತೆಗೆ ವ್ಯಾಟ್ ಕಡಿತಗೊಳಿಸಲಾಗಿದ್ದು, ಜನತೆಗೆ ಡಬಲ್ ಆಫರ್ ಸಿಕ್ಕಂತಾಗಿದೆ. ಈ ಹಿನ್ನೆಲೆ ಆಯಾ ರಾಜ್ಯದ ಮುಖ್ಯಮಂತ್ರಿಗಳು ಟ್ವೀಟ್ ಮಾಡಿ ಪ್ರಸ್ತುತ ತೈಲ ದರದ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಾಟಕ
ಅಬಕಾರಿ ಸುಂಕ ಕಡಿತದಿಂದಾಗಿ ಬೆಂಗಳೂರಲ್ಲಿ ಇದೀಗ ಪ್ರತೀ ಲೀಟರ್ ಪೆಟ್ರೋಲ್ ಮೇಲೆ 5 ರೂಪಾಯಿ ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಕಡಿತವಾಗಿತ್ತು. ಈ ಬೆನ್ನಲ್ಲೆ ಸಿಎಂ ಬೊಮ್ಮಾಯಿ ತೆರಿಗೆ ವಿನಾಯಿತಿ ನೀಡಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ತಲಾ 7 ರೂಪಾಯಿ ಕಡಿತಕ್ಕೆ ಮುಂದಾಗಿದ್ದಾರೆ. ಈ ದರ ಗುರುವಾರ ಸಂಜೆಯಿಂದಲೇ ಜಾರಿಯಾಗಲಿದೆ ಎಂದಿದ್ದಾರೆ. ಈ ನಮ್ಮ ನಿರ್ದಾರದಿಂದ ರಾಜ್ಯ ಸರಕಾರಕ್ಕೆ ಅಂದಾಜು 2,100 ಕೋಟಿ ರೂಪಾಯಿ ಕೆ.ಎಸ್.ಟಿ ಯಿಂದ ಬೊಕ್ಕಸಕ್ಕೆ ನಷ್ಟವಾಗುತ್ತದೆ. ರಾಜ್ಯದಲ್ಲಿ ಪೆಟ್ರೋಲ್ ದರ ಅಂದಾಜು 95.50 ರೂ ಹಾಗೂ ಡಿಸೇಲ್ ಅಂದಾಜು 81.50 ರೂ ಆಗುವ ನೀರಿಕ್ಷೆಯಿದೆ ಎಂದು ಟ್ವೀಟ್ ಮಾಡಿದ್ದಾರೆ.
ಅಸ್ಸೋಂ
ಇದರ ಜೊತೆ ಬಿಜೆಪಿ ಆಡಳಿತ ರಾಜ್ಯ ಅಸ್ಸೋಂನಲ್ಲೂ ತೈಲ ದರದಲ್ಲಿ ಭಾರಿ ಇಳಿಕೆಯಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಪ್ರತಿ ಲೀಟರ್‌ಗೆ ತಲಾ ₹7 ಇಳಿಕೆ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಪೆಟ್ರೋಲ್ ದರದಲ್ಲಿ ಒಟ್ಟು 12 ರೂಪಾಯಿ ಮತ್ತು ಡೀಸೆಲ್ ದರದಲ್ಲಿ 17 ರೂಪಾಯಿ ಇಳಿಯಾಗಲಿದೆ.
ಮಣಿಪುರ
ಕೇಂದ್ರದ ಘೋಷಣೆಯ ಬೆನ್ನಲ್ಲೇ ಮಣಿಪುರ ಸಹ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ತಲಾ 7 ರೂಪಾಯಿ ಕಡಿತಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಎನ್ ಬಿರೆನ್ ಸಿಂಗ್ ಟ್ವೀಟ್ ಮಾಡಿದ್ದಾರೆ.