ಲುಧಿಯಾನ (ಪಂಜಾಬ್): ಸುಮ್ಮನೆ ಕುಳಿತು ಸಮಯವನ್ನು ವ್ಯರ್ಥ ಮಾಡುವುದಕ್ಕಿಂತ ಅದನ್ನು ಸರಿಯಾಗಿ ಬಳಸುವುದು ಉತ್ತಮ. ಕೆಲವು ಒಳ್ಳೆಯ ಕೆಲಸಗಳಿಗೆ ಬಳಸಿಕೊಳ್ಳುವುದರಿಂದ ಅದ್ಭುತವಾದ ಸಂಗತಿಗಳು ಸಂಭವಿಸುತ್ತವೆ ಎಂದು ಹಿರಿಯರು ಹೇಳುತ್ತಾರೆ. ಲುಧಿಯಾನದ 13 ವರ್ಷದ ಸುಖ್ಬೀರ್ ಎಂಬ ಬಾಲಕ ಎಲ್ಲರ ಗಮನಸೆಳೆಯುವಂತಹ ಸಾಧನೆ ಮಾಡಿದ್ದಾನೆ. 8 ನೇ ತರಗತಿ ವಿದ್ಯಾರ್ಥಿ ಸುಖ್ಬೀರ್ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತನ್ನ ಬಿಡುವಿನ ವೇಳೆಯನ್ನು ಈ ಕಾರು ನಿರ್ಮಿಸಲು ಬಳಸಿದ್ದಾನೆ.
ಈ ಪೋರ ನಿರ್ಮಿಸಿದ ಕಾರು ಇದೀಗ ಎಲ್ಲರ ಚಿತ್ತ ಸೆಳೆಯುತ್ತಿದೆ. ಸುಖ್ಬೀರ್ ಈ ಕಾರನ್ನು ತನ್ನ ಅಜ್ಜನ ಸಹಾಯದಿಂದ ತಯಾರಿಸಿದ್ದಾನೆ. ಅಜ್ಜ ಮತ್ತು ಮೊಮ್ಮಗನ ಜೋಡಿ ಈ ಅದ್ಭುತ ಕಾರನ್ನು ಮಾಡಿದ್ದಾರೆ. ಅವರ ಕನಸು ನನಸಾಗಲು ಸುಮಾರು 9-10 ತಿಂಗಳುಗಳು ತೆಗೆದುಕೊಂಡಿದೆ. ಮುಖ್ಯ ವಿಷಯವೆಂದರೆ ಈ ಕಾರಿನ ಸಂಪೂರ್ಣ ರಚನೆಯನ್ನು ಸುಖ್ಬೀರ್ ಅವರೇ ವಿನ್ಯಾಸಗೊಳಿಸಿದ್ದಾರೆ. ಹೋಂಡಾ ಆಕ್ಟಿವಾ ಎಂಜಿನ್ ಅನ್ನು ಈ ಕಾರಿನಲ್ಲಿ ವಿಶೇಷವಾಗಿ ಅಳವಡಿಸಲಾಗಿದೆ. ಇದು ಕಟ್ಟಿಗೆಯ ಬಾಡಿಯನ್ನು ಹೊಂದಿದೆ.