ಚಂಡೀಗಢ:ಪಾಕಿಸ್ತಾನದಲ್ಲಿ ಅಡಗಿಕೊಂಡಿದ್ದ ಕಳ್ಳಸಾಗಣೆದಾರರಿಗೆ ಪಂಜಾಬ್ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ. ಪಂಜಾಬ್ ಪೊಲೀಸರು ದೇಶದ ಗಡಿಭಾಗಕ್ಕೆ ಕಳುಹಿಸಲಾದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿ ಆಗಿದ್ದಾರೆ. ಅಷ್ಟೇ ಅಲ್ಲ, ಫಿರೋಜ್‌ಪುರದ ಕೌಂಟರ್ ಇಂಟೆಲಿಜೆನ್ಸ್ (ಸಿಐ) ತಂಡ ಇಬ್ಬರು ಭಾರತೀಯ ಕಳ್ಳಸಾಗಣೆದಾರರನ್ನು ಬಂಧಿಸಿದೆ. ಕಳ್ಳಸಾಗಾಣಿಕೆದಾರರು ಈ ಸರಕುಗಳನ್ನು ಗಡಿಯಾಚೆಯಿಂದ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯುತ್ತಿದ್ದರು ಎಂದು ಪೊಲೀಸರಿಗೆ ಖಚಿತ ಮಾಹಿತಿ ಸಿಕ್ಕಿತ್ತು.
ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡ ಪಂಜಾಬ್ ಡಿಜಿಪಿ: ಪಂಜಾಬ್ ಡಿಜಿಪಿ ಗೌರವ್ ಯಾದವ್ ಟ್ವೀಟ್ ಮಾಡುವ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 'ಟ್ರಾನ್ಸ್-ಬಾರ್ಡರ್ ಡ್ರಗ್ ನೆಟ್‌ವರ್ಕ್‌ಗೆ ದೊಡ್ಡ ಹೊಡೆತ ಬಿದ್ದಿದೆ. ಗುಪ್ತಚರ ಸಂಸ್ಥೆ ನೇತೃತ್ವದ ಕಾರ್ಯಾಚರಣೆ ಸಂದರ್ಭದಲ್ಲಿ, ಸಿಐ ಫಿರೋಜ್‌ಪುರ 2 ವ್ಯಕ್ತಿಗಳನ್ನು ಬಂಧಿಸಲಾಗಿದೆ. ಬಂಧಿತರಿಂದ 12 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಎನ್‌ಡಿಪಿಎಸ್ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ'' ಎಂದು ಅವರು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ ಮಾಹಿತಿ ನೀಡಿದ್ದಾರೆ.
4.94 ಕೋಟಿ ರೂ. ನಗದು ವಶ:ಇದಕ್ಕೂ ಮುನ್ನ ಮಾಹಿತಿ ನೀಡಿದ ಪಂಜಾಬ್ ಡಿಜಿಪಿ, 'ಅಂತರ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಪಂಜಾಬ್ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಮುಲ್ಲನ್‌ಪುರ ದಖಾದಿಂದ ಮಾದಕವಸ್ತು ಕಳ್ಳಸಾಗಣೆದಾರನನ್ನು ಬಂಧಿಸಿದ್ದಾರೆ. ಜೊತೆಗೆ 38 ನಕಲಿ ವಾಹನ ನಂಬರ್ ಪ್ಲೇಟ್‌ಗಳು ಮತ್ತು 1 ಪಿಸ್ತೂಲ್‌ನೊಂದಿಗೆ 4.94 ಕೋಟಿ ರೂ. ನಗದು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.