ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ಚಂದ್ರ ಬೋಸ್ ಅವರ 125ನೇ ಜನ್ಮ ದಿನೋತ್ಸವ ಸ್ಮರಣಾರ್ಥ ಕೇಂದ್ರ ಸರ್ಕಾರ 82 ಜನ ಸದಸ್ಯರ ಉನ್ನತ ಸಮಿತಿಯನ್ನು ರಚನೆ ಮಾಡಿದೆ. ಪ್ರಧಾನಿ ಮೋದಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್ ಮತ್ತು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಸೇರಿ ಹಲವರು ಇದ್ದಾರೆ.
ಸುಭಾಷ್ಚಂದ್ರ ಬೋಸ್ ಅವರು 1897ರ ಜನವರಿ 23ರಂದು ಓಡಿಶಾದ ಕಟಕ್ನಲ್ಲಿ ಜನಿಸಿದ್ದರು. ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಇಂಡಿಯನ್ ನ್ಯಾಷನಲ್ ಆರ್ಮಿ (ಐಎನ್ಎ) ಸ್ಥಾಪಿಸಿದ್ದರು. ಅವರ ಜನ್ಮ ದಿನೋತ್ಸವ ನಿಮಿತ್ತ ಕೇಂದ್ರ ಸರ್ಕಾರ ಪ್ರಮುಖ ರಾಜಕೀಯ ನಾಯಕರು, ಸಾಂಸ್ಕೃತಿಕ ಪ್ರಮುಖರು ಹಾಗೂ ಕ್ರೀಡಾಪಟುಗಳು ಮತ್ತು ಸಿನಿಮಾ ತಾರೆಗಳನ್ನೊಳಗೊಂಡ ಸಮಿತಿಯನ್ನು ರಚನೆ ಮಾಡಿದೆ.
ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ, ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ, ಡಾ.ಮನಮೋಹನ್ ಸಿಂಗ್, ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ, ಹಿರಿಯ ನಟ ಮಿಥುನ್ ಚಕ್ರವರ್ತಿ ಮತ್ತು ನಟಿ ಕಾಜೋಲ್ ಮತ್ತು ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಈ ಸಮಿತಿಯಲ್ಲಿದ್ದಾರೆ.
ಕೇಂದ್ರ ಸಚಿವರು, ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ, ಸಲಹೆಗಾರ ಅಮಿತ್ ಖರೆ, ಪಶ್ಚಿಮ ಬಂಗಾಳ, ಮಣಿಪುರ ರಾಜ್ಯಪಾಲರು, ಒಡಿಶಾ, ಪಶ್ಚಿಮ ಬಂಗಾಳ, ಮಣಿಪುರ, ಮೇಘಾಲಯ, ತ್ರಿಪುರ, ನಾಗಾಲ್ಯಾಂಡ್, ಮಿಜೋರಾಂ ಮುಖ್ಯಮಂತ್ರಿಗಳು ಮತ್ತು ರಾಜ್ಯಸಭೆಯ ಉಪ ಸಭಾಪತಿ, ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೂ ಸಮಿತಿಯಲ್ಲಿದ್ದಾರೆ.