ಪಾಟ್ನಾ (ಬಿಹಾರ) :ಉತ್ತಮ ಆರ್ಥಿಕ ಸ್ಥಿತಿ, ತೆರಿಗೆ ಪಾವತಿ ಮಾಡುವ ಬಿಹಾರದ 81,595 ರೈತರನ್ನು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಿಂದ ಕೇಂದ್ರ ಸರ್ಕಾರ ಅನರ್ಹಗೊಳಿಸಿದೆ. ಜೊತೆಗೆ ಈವರೆಗೂ ಅವರು ಪಡೆದುಕೊಂಡು ಹಣವನ್ನು ಮರಳಿಸಲು ಸೂಚಿಸಲಾಗಿದೆ. ಕೆಲ ರೈತರು ಹಣವನ್ನು ಸರ್ಕಾರಕ್ಕೆ ವಾಪಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ 2 ಸಾವಿರ ರೂಪಾಯಿಯಂತೆ ರೈತರಿಗೆ ಮೂರು ಕಂತುಗಳಲ್ಲಿ 6 ಸಾವಿರ ಪಾವತಿ ಮಾಡುತ್ತಿದೆ. ಇದು ರೈತರಿಗೆ ನೆರವಾಗಲಿ ಎಂದು ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಆದರೆ, ಬಿಹಾರದಲ್ಲಿ ಅನರ್ಹ ರೈತರು ಕೂಡ ಫಲಾನುಭವಿಗಳಾಗಿದ್ದು, ಇದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಹೀಗಾಗಿ ಅವರನ್ನು ಯೋಜನೆಯಿಂದ ಕೈಬಿಡಲಾಗಿದೆ.
ಪಟ್ಟಿಯಿಂದ ಅನರ್ಹರು ಔಟ್:ಬಿಹಾರದಲ್ಲಿ 81,595 ರೈತರಲ್ಲಿ 45,879 ರೈತರು ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. ಉಳಿದ 35,716 ರೈತರು ಇತರ ಕಾರಣಗಳಿಂದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಬಿದ್ದಿದ್ದಾರೆ. ಅರ್ಹ ರೈತರಲ್ಲದಿದ್ದರೂ ಸರ್ಕಾರದ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಸಂಬಂಧಪಟ್ಟ ಬ್ಯಾಂಕ್‌ಗಳ ಮೂಲಕ ಫಲಾನುಭವಿಗಳಿಂದ ಹಣವನ್ನು ಮರಳಿ ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸೂಚಿಸಲಾಗಿದೆ ಎಂದು ರಾಜ್ಯ ಕೃಷಿ ಇಲಾಖೆಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಸದ್ಯ ಅನರ್ಹಗೊಂಡ ರೈತರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಲಾಗಿದೆ. ಅವರು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ನಿಯಮಗಳಡಿ ಬರುವುದಿಲ್ಲ. ಆದ್ದರಿಂದ ಫಲಾನುಭವಿಗಳಾಗಲು ಅವರು ಅನರ್ಹರಾಗಿದ್ದಾರೆ. ಹೀಗಾಗಿ ಅವರನ್ನು ಸರ್ಕಾರದ ಯೋಜನೆಯ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಹೆಚ್ಚುವರಿ ಕೃಷಿ ನಿರ್ದೇಶಕ ಧನಂಜಯ್ ಪತಿ ತ್ರಿಪಾಠಿ ಮಾಧ್ಯಮಗಳಿಗೆ ತಿಳಿಸಿದರು.
ಈ ಯೋಜನೆಯಡಿ ಈಗಾಗಲೇ ಆರ್ಥಿಕ ಲಾಭ ಪಡೆದಿರುವ ರೈತರಿಂದ ಮರುಪಾವತಿ ಪ್ರಕ್ರಿಯೆ ಆರಂಭಿಸುವಂತೆ ಕೇಂದ್ರ ಸರ್ಕಾರ ಕೃಷಿ ಇಲಾಖೆಗೆ ಸೂಚಿಸಿದೆ. ರಾಜ್ಯ ಬ್ಯಾಂಕರ್‌ಗಳ ಸಮಿತಿಯ ಸಭೆ ಇತ್ತೀಚೆಗೆ ನಡೆಯಿತು. ಅಧಿಕಾರಿಗಳು ಆದ್ಯತೆಯ ಆಧಾರದ ಮೇಲೆ ಮರುಪಾವತಿಯನ್ನು ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ತಿಳಿಸಲಾಗಿದೆ. ಫಲಾನುಭವಿಗಳಿಗೆ ಹಣ ಹಿಂತಿರುಗಿಸಲು ನೋಟಿಸ್ ಕಳುಹಿಸುವಂತೆ ಸೂಚಿಸಲಾಗಿದೆ ಎಂದರು.
ಏನಿದು ಪಿಎಂ ಕಿಸಾನ್ ಸಮ್ಮಾನ್ ಯೋಜನೆ?:ರೈತರಿಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ 2019 ರಲ್ಲಿ ಈ ಯೋಜನೆಯನ್ನು ಜಾರಿ ಮಾಡಿತು. 2018 ರಿಂದಲೇ ಪೂರ್ವಾನ್ವಯವಾಗುವಂತೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಯಿತು. ರೈತಲು ಬೀಜ, ಗೊಬ್ಬರ, ಕಟಾವಿಗೆ ಹಣವನ್ನು ಬಳಸಿಕೊಳ್ಳಲು ಅನುವಾಗುವಂತೆ ಯೋಜನೆಯಡಿಯ ಫಲಾನುಭವಿಗಳಿಗೆ ವರ್ಷದಲ್ಲಿ ಮೂರು ಬಾರಿ 2 ಸಾವಿರ ರೂಪಾಯಿಯಂತೆ ನೀಡಲಾಗುತ್ತದೆ. ಏಪ್ರಿಲ್-ಜುಲೈ, ಆಗಸ್ಟ್-ನವೆಂಬರ್ ಮತ್ತು ಡಿಸೆಂಬರ್-ಮಾರ್ಚ್ನಲ್ಲಿ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ.
ಇದನ್ನೂ ಓದಿ:14ನೇ ಕಂತಿನ ಪಿಎಂ ಕಿಸಾನ್ ಹಣ ಬಿಡುಗಡೆ.. 8.5 ಕೋಟಿ ಅರ್ಹ ರೈತರಿಗೆ 17 ಸಾವಿರ ಕೋಟಿ ರೂಪಾಯಿ ನೆರವು