ಜಬಲ್ಪುರ(ಮಧ್ಯಪ್ರದೇಶ) :ಆರೋಗ್ಯ ಕಾಪಾಡಿಕೊಳ್ಳಲು ಸೈಕ್ಲಿಂಗ್ ಜಾಥಾ ಮಾಡ್ತಾರೆ. ಇನ್ನೂ ಕೆಲವರು ಕಿಲೋಮೀಟರ್ಗಟ್ಟಲೇ ಸೈಕ್ಲಿಂಗ್ ಮಾಡಿಕೊಂಡು ಹೋಗಿ ಆರೋಗ್ಯ ಕಾಪಾಡಿಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬರು ದುಡಿಮೆಗೆ ದಿನವೂ 20 ರಿಂದ 22 ಕಿಲೋಮೀಟರ್ ಸೈಕಲ್ ಸವಾರಿ ಮಾಡುತ್ತಾರೆ.
ಮಧ್ಯಪ್ರದೇಶದ ಜಬಲ್ಪುರ ನಿವಾಸಿಯಾದ ಶಾಂತಿಬಾಯಿ ಎಂಬುವರು ದಿನವೂ 22 ಕಿ.ಮೀ ಸೈಕಲ್ ತುಳಿದುಕೊಂಡು ಹೋಗಿ ಮನೆಗಳಲ್ಲಿ ಕೆಲಸ ಮಾಡಿ ಬಳಿಕ ಅದೇ ಸೈಕಲ್ ತುಳಿದುಕೊಂಡು ವಾಪಸ್ ಮನೆಗೆ ಬರುತ್ತಾರಂತೆ. ನೋಡಲು ಸಣ್ಣಗೆ ಇದ್ದರೂ ಮೈಯಲ್ಲಿನ ಕಸುವು ಮಾತ್ರ ನೀಗಿಲ್ಲ. ಅಂದಹಾಗೆ ಇವರ ವಯಸ್ಸು ಈಗ ಬರೀ 81 ವರ್ಷ.
ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್ ತುಳಿಯುವ ಈ ಅಜ್ಜಿ! ಓದು-ಬರಹ ಬಾರದ ಶಾಂತಿಬಾಯಿಗೆ ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಇದೀಗ ಏಕಾಂಗಿಯಾಗಿ ಜೀವಿಸುತ್ತಿರುವ ಶಾಂತಿಬಾಯಿ ಜೀವನಕ್ಕಾಗಿ ಮನೆಕೆಲಸ ಮಾಡಿಕೊಂಡಿದ್ದಾರೆ.
ಇವರು ವಾಸಿಸುವ ಪ್ರದೇಶದಿಂದ 22 ಕಿಲೋಮೀಟರ್ ದೂರದಲ್ಲಿರುವ ಮನೆಗಳಿಗೆ ಕೆಲಸ ಮಾಡಲು ಹೋಗುವ ಶಾಂತಿಬಾಯಿ ಅವರು, ತಮ್ಮ ಹಳೆಯ ಸೈಕಲ್ ಅನ್ನೇ ವಾಹನವನ್ನಾಗಿ ಮಾಡಿಕೊಂಡಿದ್ದಾರೆ. ದಿನವೂ ಸೈಕಲ್ ಸವಾರಿ ಮಾಡಿಕೊಂಡೇ ಕೆಲಸಕ್ಕೆ ಹೋಗುತ್ತಾರಂತೆ.
ವಯಸ್ಸು 81 ಆದ್ರೂ ಕೆಲಸಕ್ಕೆಂದು 22 ಕಿ.ಮೀ ಸೈಕಲ್ ತುಳಿಯುವ ಈ ಅಜ್ಜಿ! ವಯಸ್ಸು 81 ಆದರೂ ಪರಾವಲಂಬಿಯಾಗದೇ ತಾವೇ ಸ್ವತಃ ದುಡಿದು ತಿನ್ನುವ ಛಾತಿ ಇವರದಾಗಿದೆ. ಕೆಲಸಕ್ಕೆಂದು ಸೈಕಲ್ ತುಳಿದು ಹೋಗುವಾಗ ಸುಸ್ತಾದರೆ ದಾರಿ ಮಧ್ಯೆಯೇ ಕೆಲ ಹೊತ್ತು ಕುಳಿತು ಸುಧಾರಿಸಿಕೊಂಡು ಮತ್ತೆ ಗಮ್ಯಸ್ಥಾನಕ್ಕೆ ತೆರಳುತ್ತಾರಂತೆ.
ಅಲ್ಲದೇ, ಈ ಇಳಿವಯಸ್ಸಿನಲ್ಲೂ ಅಜ್ಜಿ ಶಾಂತಿಬಾಯಿಯ ಕಣ್ಣುಗಳು ನಿಚ್ಚಳವಾಗಿ ಕಾಣುತ್ತವಂತೆ. ಯಾವುದೇ ಕನ್ನಡಕದ ಸಹಾಯವೂ ಇವರಿಗೆ ಬೇಕಿಲ್ಲವಂತೆ. ಹಲವು ವರ್ಷಗಳಿಂದ ಈ ರೀತಿ ಸೈಕಲ್ ತುಳಿದೆ ಕೆಲಸಕ್ಕೆ ಹೋಗುವ ಅಜ್ಜಿ ಶಾಂತಿಬಾಯಿ ಇಂದಿನ ಯುವಕರಿಗೆ ಮಾದರಿ ಎಂದೇ ಹೇಳಬಹುದು.
ಇದನ್ನೂ ಓದಿ:ಬಿಜೆಪಿಯ ಸರಬ್ಜಿತ್ ಕೌರ್ಗೆ ಚಂಡೀಗಢ ಮೇಯರ್ ಪಟ್ಟ.. ಒಂದೇ ವೋಟ್ನಿಂದ ಎಎಪಿಗೆ ಸೋಲು