ನವದೆಹಲಿ:ದೇಶದಲ್ಲಿ ಇದುವರೆಗೂ 80 ಕೋಟಿ ವ್ಯಾಕ್ಸಿನೇಷನ್ ಹಾಕಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ವೈದ್ಯಕೀಯ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಅಭಿನಂದನೆಯನ್ನೂ ಸಲ್ಲಿಸಿದೆ.
ನಿನ್ನೆ ಒಂದೇ ದಿನ ಹೆಚ್ಚು ವ್ಯಾಕ್ಸಿನೇಷನ್ ಹಾಕಿದ್ದಕ್ಕೆ ಈಗಾಗಲೇ ಪ್ರಧಾನಿ ನರೇಂದ್ರಮೋದಿ ಹರ್ಷ ವ್ಯಕ್ತಪಡಿಸಿದ್ದು, ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಸಲ್ಲಿಕೆ ಮಾಡಿದ್ದಾರೆ. ಇದೀಗ ಒಟ್ಟಾರೆ 80 ಕೋಟಿ ಲಸಿಕೆಗಳನ್ನು ಯಶಸ್ವಿಯಾಗಿ ಹಾಕುವ ಮೂಲಕ ವಿಶೇಷ ಸಾಧನೆ ಮಾಡಿದೆ.
ಸೆಪ್ಟೆಂಬರ್ 17 ರಂದು ಬಿಹಾರ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ವ್ಯಾಕ್ಸಿನೇಷನ್ ಮಾಡಲಾಗಿತ್ತು. ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 29.50 ಲಕ್ಷ ಜನರಿಗೆ ಲಸಿಕೆ ಹಾಕಲಾಗಿತ್ತು. ಇನ್ನು ಬಿಹಾರದಲ್ಲೂ 29.60 ಲಕ್ಷ ಲಸಿಕೆಯನ್ನು ಹಾಕಲಾಗಿದೆ. ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶದಲ್ಲೂ 25 ಲಕ್ಷಕ್ಕೂ ಹೆಚ್ಚಿನ ಲಸಿಕೆಗಳನ್ನು ಹಾಕಲಾಗಿದೆ.
ಈ ನಡುವೆ ಡಿಸೆಂಬರ್ ವೇಳೆಗೆ ಮಕ್ಕಳನ್ನು ಬಿಟ್ಟು ಉಳಿದೆಲ್ಲ ನಾಗರಿಕರಿಗೆ ಸಂಪೂರ್ಣವಾಗಿ ಲಸಿಕೆ ಹಾಕುವ ಗುರಿಯನ್ನ ಭಾರತ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಇಂದು ಆರೋಗ್ಯ ಇಲಾಖೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ವ್ಯಾಕ್ಸಿನೇಷನ್ ಪ್ರಗತಿ ಪರಿಶೀಲಿಸಲು ಹೈ ಲೇವಲ್ ಸಭೆ ಕರೆದಿದೆ.