ಪಾಲಕ್ಕಾಡ್ (ಕೇರಳ): ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ತಿರುವಿಲ್ವಾಮಲದಲ್ಲಿ ವಿಡಿಯೋ ವೀಕ್ಷಿಸುತ್ತಿದ್ದ ವೇಳೆ ಮೊಬೈಲ್ ಫೋನ್ ಸ್ಫೋಟಗೊಂಡು ಎಂಟು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ.
ಇಲ್ಲಿನ ತಿರುವಿಲ್ವಾಮಲದಲ್ಲಿ ಸೋಮವಾರ ರಾತ್ರಿ ಈ ದುರಂತ ಸಂಭವಿಸಿದೆ. ಮೃತ ಬಾಲಕಿಯನ್ನು ಅಶೋಕ್ ಕುಮಾರ್ ಮತ್ತು ಸೌಮ್ಯ ದಂಪತಿಯ ಪುತ್ರಿ ಎಂದು ಗುರುತಿಸಲಾಗಿದೆ. ಈ ದಂಪತಿಗೆ ಏಕೈಕ ಮಗಳು ಇದ್ದಳು. ಪುನರ್ಜನಿ ಕ್ರೈಸ್ಟ್ ನ್ಯೂ ಲೈಫ್ ಶಾಲೆಯಲ್ಲಿ ಬಾಲಕಿ ಮೂರನೇ ತರಗತಿ ಓದುತ್ತಿದ್ದಳು ಎಂದು ತಿಳಿದು ಬಂದಿದೆ.
ಇದನ್ನೂ ಓದಿ:ಮೊಬೈಲ್‌ನಲ್ಲೇ ಕಳೆದು ಹೋಗ್ತಿದೆ ಮಕ್ಕಳ ಬೇಸಿಗೆ ರಜೆಯ ಅಮೂಲ್ಯ ಸಮಯ!
ಪಟ್ಟಿಪರಂಬ ಮಾರಿಯಮ್ಮನ ದೇವಸ್ಥಾನದ ಬಳಿಯ ಅಶೋಕ್ ಕುಮಾರ್ ದಂಪತಿಯ ಮನೆ ಇದೆ. ಸೋಮವಾರ ರಾತ್ರಿ 10.30ರ ಸುಮಾರಿಗೆ ಮನೆಯಲ್ಲಿ ಮೊಬೈಲ್ನಲ್ಲಿ ಬಾಲಕಿ ವಿಡಿಯೋ ವೀಕ್ಷಿಸುತ್ತಿದ್ದಳು. ಈ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡಿದ್ದು, ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಹಳೆಯನ್ನೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ವಿಧಿವಿಜ್ಞಾನ ತಜ್ಞರಿಂದಲೂ ಸ್ಥಳ ಪರಿಶೀಲನೆ ನಡೆಸಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಫೊರೆನ್ಸಿಕ್ ವರದಿ ಬಂದ ನಂತರವಷ್ಟೇ ಘಟನೆ ಕುರಿತು ಹೆಚ್ಚಿನ ಮಾಹಿತಿ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮೊಬೈಲ್ ಫೋನ್‌ಗಳ ಒತ್ತಡ: ಕಣ್ಣಿನ ಬಗ್ಗೆ ಜಾಗ್ರತೆ ವಹಿಸುವುದು ಅಗತ್ಯ
ಮೊಬೈಲ್ ಸ್ಫೋಟದಿಂದ ರೈತ ಸಾವು:ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ಬೆಳಕಿಗೆ ಬಂದಿದ್ದವು. ಫೆಬ್ರವರಿಯಲ್ಲಿ ಮೊಬೈಲ್ ಸ್ಫೋಟದಿಂದ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಬಾದ್‌ನಗರ ಪಟ್ಟಣದಲ್ಲಿ 60 ವರ್ಷದ ರೈತರೊಬ್ಬರು ಸಾವನ್ನಪ್ಪಿದ್ದರು. ಸುಟ್ಟ ಗಾಯಗಳೊಂದಿಗೆ ತಮ್ಮ ಜಮೀನಿನ ಬಳಿಯ ಕೋಣೆಯಲ್ಲಿ ಶವವಾಗಿ ರೈತ ಪತ್ತೆಯಾಗಿದ್ದರು.
ಈ ಬಗ್ಗೆ ಪೊಲೀಸರು ತನಿಖೆ ಕೈಗೊಂಡಾಗ ಮೃತ ರೈತನನ್ನು ದಯಾರಾಮ್ ಬರೋದ್ ಎಂದು ಗುರುತಿಸಲಾಗಿತ್ತು. ಇಲ್ಲಿನ ರುನಿಜಾ ರಸ್ತೆಯಲ್ಲಿರುವ ತಮ್ಮ ಜಮೀನಿನಲ್ಲಿ ದಯಾರಾಮ್ ಒಂಟಿಯಾಗಿ ವಾಸಿಸುತ್ತಿದ್ದರು. ಮೊಬೈಲ್ ಬಳಕೆಯ ವೇಳೆ ಅದು ಸ್ಫೋಟಗೊಂಡಿತ್ತು. ಇದರಿಂದ ಸ್ವಿಚ್ ಬೋರ್ಡ್‌ಗೂ ಆಗಿತ್ತು. ಮೊಬೈಲ್ ಸ್ಫೋಟದಿಂದ ಕುತ್ತಿಗೆ ಮತ್ತು ಎದೆಯ ಸುತ್ತ ತೀವ್ರ ಸುಟ್ಟ ಗಾಯಗಳಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಕಳೆದ ವರ್ಷ ಉತ್ತರ ಪ್ರದೇಶದ ಬರೇಲಿಯಲ್ಲಿ ಚಾರ್ಜ್ ಮಾಡಲು ಇಟ್ಟಿದ್ದ ಮೊಬೈಲ್ ಫೋನ್‌ನ ಬ್ಯಾಟರಿ ಸ್ಫೋಟಗೊಂಡು ಎಂಟು ತಿಂಗಳ ಮಗು ಸಾವನ್ನಪ್ಪಿದ್ದ ಘಟನೆ ಕೂಡ ವರದಿಯಾಗಿತ್ತು.
ಮೊಬೈಲ್ ಅನಾಹುತ ತಪ್ಪಿಸುವ ಕ್ರಮ:ಮೊಬೈಲ್ ಫೋನ್ ಸ್ಫೋಟವು ಹಲವಾರು ಕಾರಣಗಳಿಂದ ಸಂಭವಿಸಬಹುದು. ಇದರಲ್ಲಿ ಪ್ರಮುಖ ಕಾರಣವೆಂದರೆ ಬ್ಯಾಟರಿ ಆಗಿರುತ್ತದೆ. ಚಾರ್ಜಿಂಗ್ ಸಮಯದಲ್ಲಿ ಬ್ಯಾಟರಿಯು ತುಂಬಾ ಬಿಸಿಯಾಗಿದ್ದರೆ, ಅದು ರಾಸಾಯನಿಕ ಸಂಯೋಜನೆಯು ಹಾನಿಯಾಗಿ ಸ್ಫೋಟಗೊಳ್ಳಬಹುದು. ಇಂತಹ ಸ್ಫೋಟದಿಂದ ಉಂಟಾಗುವ ಹಾನಿಯ ಸಾಧ್ಯತೆಗಳನ್ನು ತಪ್ಪಿಸಲು ಮಲಗುವಾಗ ಮೊಬೈಲ್ ಪಕ್ಕದಲ್ಲಿರಿಸಿಕೊಂಡು ಚಾರ್ಜ್ ಮಾಡಬಾರದು. ಸುಮಾರು 30 ಪ್ರತಿಶತದಷ್ಟು ಬ್ಯಾಟರಿ ಬಾಳಿಕೆಯಲ್ಲಿ ಫೋನ್ ಚಾರ್ಜ್ ಮಾಡಬೇಕು ಮತ್ತು ಹೆಚ್ಚು ಚಾರ್ಜ್ ಮಾಡುವುದನ್ನು ತಪ್ಪಿಸುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ:ಮೊಬೈಲ್ ಸ್ಫೋಟಗೊಂಡು ರೈತ ಸಾವು