ಲಖನೌ:ಕೊರೊನಾ ಅಟ್ಟಹಾಸಕ್ಕೆ ಒಂದೇ ಕುಟುಂಬದ 8 ಮಂದಿ ಕೇವಲ 25 ದಿನದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಿಂದ ಇಡೀ ಕುಟುಂಬವು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ. ಇನ್ನು ಈ ಘಟನೆಗೆ ಚಿಕಿತ್ಸೆಯ ಕೊರತೆಯೇ ಕಾರಣ ಎನ್ನಲಾಗುತ್ತಿದೆ.
ಇನ್ನು ಈ ಬಗ್ಗೆ ಮಾತನಾಡಿದ ಕುಟುಂಬದ ಮುಖ್ಯಸ್ಥ ಓಂಕಾರ್ ಸಿಂಗ್, “ ನಾನು ನನ್ನ 4 ಸಹೋದರರು, ಇಬ್ಬರು ಸಹೋದರಿಯರು, ತಾಯಿ ಮತ್ತು ದೊಡ್ಡಮ್ಮನನ್ನು ಕಳೆದುಕೊಂಡಿದ್ದೇನೆ. ಒಂದು ದಿನದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ಶವ ಹೊರುವಾಗ ಮನಸ್ಸು ಭಾರವಾಯಿತು” ಎಂದು ಕಣ್ಣೀರು ಸುರಿಸಿದರು.
ನನ್ನ ಸಹೋದರನಿಗೆ ಜ್ವರ ಬರುತ್ತಿತ್ತು. ಹೀಗಾಗಿ ಹಳ್ಳಿಯಲ್ಲಿಯೇ ಸಣ್ಣ ವೈದ್ಯರಿಂದ ಔಷಧಗಳನ್ನು ತೆಗೆದುಕೊಂಡು ಚಿಕಿತ್ಸೆ ಪಡೆಯುತ್ತಿದ್ದ. ಆದರೆ, ತೀವ್ರವಾಗಿ ಜ್ವರ ಕಾಣಿಸಿಕೊಂಡ ಬಳಿಕ ಬಿಕೆಟಿಯ ರಾಮ್ ಸಾಗರ್ ಮಿಶ್ರಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಆತ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ.
ಅಣ್ಣನ ಸಾವಿನ ಸುದ್ದಿ ಕೇಳಿದ ನನ್ನ ದೊಡ್ಡಮ್ಮ ಕೂಡ ಅನಾರೋಗ್ಯಕ್ಕೆ ಒಳಗಾದರು. ಅದೇ ಆಘಾತದಲ್ಲಿ ಅವರೂ ಕೂಡ ನಿಧನರಾದರು. ಇನ್ನು ಉಳಿದ ನನ್ನ ಸಹೋದರನಿಗೂ ಕೊರೊನಾ ಅಂಟಿಕೊಂಡಿತ್ತು. ಹೀಗಾಗಿ ಅವರನ್ನು ಚಾರ್ಬಾಗ್ ಬಳಿಯ ರೈಲ್ವೆ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವು ಇನ್ನೊಬ್ಬ ಸಹೋದರನ ಜೀವವನ್ನೂ ತೆಗೆದುಕೊಂಡಿತು ಎಂದರು. ಹೀಗೆ ಕೊರೊನಾಗೆ ನನ್ನ ಕುಟುಂಬದ 8 ಮಂದಿ ಸಾವನ್ನಪ್ಪಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದರು.
ಇನ್ನು ನಮ್ಮ ಗ್ರಾಮದಲ್ಲಿ ಕೊರೊನಾಗೆ ಯಾವುದೇ ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಇಲ್ಲಿನ ಜನಪ್ರತಿನಿಧಿಗಳು ನಮಗೆ ಯಾವ ವ್ಯವಸ್ಥೆಯನ್ನೂ ಮಾಡಿಲ್ಲ. ಇಮ್ಹಲಿಯಾ ಪೂರ್ವಾ ಗ್ರಾಮದಲ್ಲಿ ಈವರೆಗೆ 50 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಕೊರೊನಾಗೆ ಸೋಂಕಿಗೆ ಒಳಗಾಗಿದ್ದಾರೆ ಎಂದು ಹೇಳಿದ್ದಾರೆ.