ಜೈಪುರ್ (ರಾಜಸ್ಥಾನ) : ಆಫ್ರಿಕಾದ ನಮೀಬಿಯಾದಿಂದ ಸೆ. 16 ರಂದು 8 ಚೀತಾಗಳನ್ನು ಕಾರ್ಗೋ ವಿಮಾನದ ಮೂಲಕ ಜೈಪುರ ವಿಮಾನ ನಿಲ್ದಾಣಕ್ಕೆ ಕರೆ ತರಲಾಗುತ್ತಿದೆ. ಸೆ.17ರಂದು ಜೈಪುರ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ನಲ್ಲಿ ಚೀತಾಗಳನ್ನು ಮಧ್ಯಪ್ರದೇಶದ ಕುನೊ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ. ಎಂಟು ಚಿರತೆಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳು ಸೇರಿವೆ. ಇವು 4 ರಿಂದ 6 ವರ್ಷದ ಚೀತಾಗಳು ಎಂದು ಹೇಳಲಾಗುತ್ತಿದೆ.
ಕುನೋ ಪಾಲ್ಪುರ್ ಪ್ರದೇಶವು ಚಂಬಲ್ಗೆ ಹೊಂದಿಕೊಂಡಿರುವ ಪ್ರದೇಶವಾಗಿದೆ. ಈ ಪ್ರದೇಶವು ಜೈಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿದೆ. ಆದ್ದರಿಂದ ನೇರವಾಗಿ ಆಫ್ರಿಕಾದಿಂದ ಜೈಪುರ ವಿಮಾನ ನಿಲ್ದಾಣಕ್ಕೆ ಚೀತಾಗಳನ್ನು ಕರೆತಂದು ಅಲ್ಲಿಂದ ಮಧ್ಯಪ್ರದೇಶದ ಕುನೊ ಪಾಲ್ಪುರ್ ರಾಷ್ಟ್ರೀಯ ಉದ್ಯಾನವನಕ್ಕೆ ಕೊಂಡೊಯ್ಯಲಾಗುತ್ತದೆ.
ಕೇಂದ್ರ ಮೃಗಾಲಯ ಪ್ರಾಧಿಕಾರ ಮತ್ತು ಮಧ್ಯಪ್ರದೇಶ ಅರಣ್ಯ ಇಲಾಖೆಯ ತಂಡದ ಮೇಲ್ವಿಚಾರಣೆಯಲ್ಲಿ ಚೀತಾಗಳನ್ನು ಕರೆ ತರಲಾಗುತ್ತಿದೆ. ಚಿರತೆಗಳ ಆರೋಗ್ಯ ಮತ್ತು ವೈದ್ಯಕೀಯ ಸೌಲಭ್ಯಗಳಿಗಾಗಿ ಜೈಪುರ ವಿಮಾನ ನಿಲ್ದಾಣದಲ್ಲಿ ವಿಶೇಷ ತಂಡವನ್ನು ನಿಯೋಜಿಸಲಾಗಿದೆ. ಚೀತಾಗಳನ್ನು ಕರೆತರುವ ವಿಮಾನದಲ್ಲಿ ವೈದ್ಯಕೀಯ ತಂಡವನ್ನೂ ಇರಿಸಲಾಗಿದೆ.