ಹೈದರಾಬಾದ್:ಎರಡನೇ ಹಂತದ ಕೋವಿಡ್ ವೈರಸ್ ಹೆಚ್ಚಾಗಿ ಹರಡಲು ಶುರುವಾಗಿದ್ದು, ಕೆಲವೊಂದು ರಾಜ್ಯಗಳಲ್ಲಿ ಈಗಾಗಲೇ ಪರಿಸ್ಥಿತಿ ಕೈಮೀರಿ ಹೋಗಿದೆ. ಸದ್ಯ ದೇಶದಲ್ಲಿ ಮಕ್ಕಳಿಗೆ ಕೊರೊನಾ ವೈರಸ್ ವ್ಯಾಕ್ಸಿನ್ ನೀಡುವ ಅಭಿಯಾನ ಆರಂಭಗೊಂಡಿಲ್ಲವಾದ್ದರಿಂದ ಸೋಂಕು ಹೆಚ್ಚಾಗಿ ಮಕ್ಕಳಲ್ಲೂ ಕಂಡು ಬರುತ್ತಿದೆ.
ಕೇಂದ್ರ ಆರೋಗ್ಯ ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಐದು ರಾಜ್ಯಗಳಲ್ಲಿ 79,688 ಮಕ್ಕಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದ್ದಾಗಿ ಮಾಹಿತಿ ನೀಡಿದೆ. ಪ್ರಮುಖವಾಗಿ ಮಹಾಮಾರಿ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ ಮಾರ್ಚ್ 1ರಿಂದ ಏಪ್ರಿಲ್ 4ರ ಮಧ್ಯದಲ್ಲಿ 60,684 ಮಕ್ಕಳಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದು, ಇದರಲ್ಲಿ 9,882 ಮಕ್ಕಳು ಐದು ವರ್ಷದೊಳಗಿನವರಾಗಿದ್ದಾರೆ.
ಇದನ್ನೂ ಓದಿ: ಒಡಹುಟ್ಟಿದ ತಂಗಿಯನ್ನೂ ಬಿಡದ ಕಾಮುಕ ಸಹೋದರರು.. ಬಾಲ್ಯದಿಂದಲೂ ಲೈಂಗಿಕ ಕಿರುಕುಳ!
ಉಳಿದಂತೆ ಛತ್ತೀಸ್ಗಢದಿಂದ 5,940 ಮಕ್ಕಳು, ಕರ್ನಾಟಕದಲ್ಲಿ 7,327 ಮಕ್ಕಳು, ಉತ್ತರ ಪ್ರದೇಶ 3,004 ಮಕ್ಕಳಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಇದೇ ವಿಷಯವಾಗಿ ದೆಹಲಿ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ವೈದ್ಯರು ಮಾತನಾಡಿದ್ದು, ದೆಹಲಿಯಲ್ಲಿನ ಪರಿಸ್ಥಿತಿ ಕೂಡ ಇದೇ ರೀತಿಯಾಗಿದ್ದು, ಇಲ್ಲೂ 2,733 ಮಕ್ಕಳಲ್ಲಿ ಕೋವಿಡ್ ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳಲ್ಲಿ ಕೋವಿಡ್ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಳೆದ 24 ಗಂಟೆಯಲ್ಲಿ ದೇಶದಲ್ಲಿ 1,15,736 ಹೊಸ ಕೇಸ್ ಕಾಣಿಸಿಕೊಂಡಿದ್ದು, 630 ಜನರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.