ಅಲ್ವಾರ್( ರಾಜಸ್ಥಾನ): ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ 33 ವರ್ಷಗಳ ನಂತರ ಹಠಾತ್ ಮನೆಗೆ ಮರಳಿದ ಘಟನೆಯೊಂದು ನಡೆದಿದೆ. 33 ವರ್ಷಗಳ ಹಿಂದೆ ಹಠಾತ್ ನಾಪತ್ತೆಯಾಗಿದ್ದ ವ್ಯಕ್ತಿ ಮನೆಗೆ ಮರಳುವ ಮೂಲಕ ಅವರ ಕುಟುಂಬ ಮತ್ತು ಸಂಬಂಧಿಕರನ್ನು ಬೆಚ್ಚಿ ಬೀಳುವಂತೆ ಮಾಡಿದೆ.
33 ವರ್ಷಗಳ ನಂತರ ಮಂಗಳವಾರ ಮೇ 30 ರಂದು ಅಲ್ವಾರ್ ಜಿಲ್ಲೆಯ ಬನ್ಸೂರ್ ಗ್ರಾಮದಲ್ಲಿ ಕುಟುಂಬದೊಂದಿಗೆ ಮತ್ತೆ ಒಂದಾಗಿದ್ದಾರೆ. ಮೂರು ದಶಕಗಳ ಬಳಿಕ 75 ವರ್ಷದ ಹನುಮಾನ್ ಸೈನಿ ಅವರು ಗ್ರಾಮಕ್ಕೆ ಮರಳಿದರು. ಹಲವು ವರ್ಷಗಳ ಬಳಿಕ ಮನೆಗೆ ಬಂದ ಸೈನಿಯನ್ನು ಗ್ರಾಮದ ಜನರು ಹಾಗೂ ಕುಟುಂಬ ಸಂತಸದಿಂದ ಸ್ವಾಗತಿಸಿತು. ಅಷ್ಟೇ ಅಲ್ಲ ಗುಂಪು ಗುಂಪಾಗಿ ಬಂದು ಹನುಮಾನ್ ಸೈನಿಗೆ ವಿರೋಚಿತ ಸ್ವಾಗತದೊಂದಿಗೆ ಹರ್ಷ ವ್ಯಕ್ತಪಡಿಸಿತು.
ಸೈನಿ ಅವರಿಗೆ ಒಟ್ಟು ಐದು ಮಕ್ಕಳಿದ್ದಾರೆ. ಮೂರು ಹೆಣ್ಣುಮಕ್ಕಳು ಮತ್ತು ಇಬ್ಬರು ಗಂಡುಮಕ್ಕಳು ಕೂಡಾ ಮದುವೆಯಾಗಿದ್ದಾರೆ. ಸೈನಿ ಇದ್ದಕ್ಕಿದ್ದಂತೆ ನಾಪತ್ತೆ ಆದ ಹಲವು ವರ್ಷಗಳ ಬಳಿಕ ಅವರ ಕುಟುಂಬ ಇತ್ತೀಚೆಗಷ್ಟೇ ಹನುಮಾನ್ ಅವರ ಮರಣ ಪ್ರಮಾಣಪತ್ರವನ್ನ ಸಂಬಂಧ ಪಟ್ಟ ಇಲಾಖೆಯಿಂದ ಪಡೆದುಕೊಂಡಿತ್ತು. ಆದರೆ, ಮಂಗಳವಾರ ತಂದೆ ಮನೆಗೆ ಹಿಂದಿರುಗಿದ ಸುದ್ದಿ ತಿಳಿದು ಒಡಹುಟ್ಟಿದವರು ತಂದೆಯ ಮನೆಗೆ ದೌಡಾಯಿಸಿದರು. ಅವರನ್ನು ನೋಡಲು ಮತ್ತು ಅವರ ಯೋಗಕ್ಷೇಮವನ್ನು ತಿಳಿದು ಸಂತಸ ಪಟ್ಟರು. ಹನುಮಾನ್ ಸೈನಿ ಅವರ ಸಹೋದರಿ ಮತ್ತು ಪುತ್ರಿಯರಿಗೆ ತಂದೆ ಹಿಂದಿರುಗಿದ ವಿಷಯ ತಿಳಿದು ಖುಷಿಯಾದರು. ತಂದೆಯ ಆರೋಗ್ಯವನ್ನು ವಿಚಾರಿಸಿದರು.
75 ವರ್ಷದ ಹನುಮಾನ್ ಸೈನಿ ಅವರು ಇಷ್ಟು ವರ್ಷಗಳ ಕಾಲ ನಾಪತ್ತೆಯಾಗಿರುವ ಬಗ್ಗೆ ಕೇಳಿದಾಗ, ’’ಹಿಮಾಚಲ ಪ್ರದೇಶದ ಕಾಂಗ್ರಾ ಮಾತೆಯ ದೇವಸ್ಥಾನದಲ್ಲಿ ಕಳೆದ ಮೂರು ದಶಕಗಳನ್ನು ಕಳೆದಿದ್ದೇನೆ ಎಂದರು. ಅಷ್ಟೇ ಅಲ್ಲ "ಮಾತೆ ನನ್ನನ್ನು ಕರೆದಿದ್ದರು" ಎಂದು ಹೇಳಿದರು. “ನಾನು ಇಲ್ಲಿಂದ ತೆರಳಿದ ಮೇಲೆ ಮಾತಾ ದೇವಸ್ಥಾನವನ್ನು ತಲುಪಿದೆ ಮತ್ತು ಸುಮಾರು 33 ವರ್ಷಗಳ ಕಾಲ ಅಲ್ಲಿ ಪೂಜೆ ಮಾಡಿಕೊಂಡು ಇದ್ದೆ. ಮಾತೆಯ ಆದೇಶದ ಮೇರೆಗೆ ನಾನು ನನ್ನ ಗೂಡಿಗೆ ಮರಳಿದ್ದೇನೆ’’ ಎಂದು ಸೈನಿ ಹೇಳಿಕೊಂಡಿದ್ದಾರೆ.