ದೇಶದ ಸ್ವಾತಂತ್ರ್ಯಕ್ಕಾಗಿ ಅದೆಷ್ಟೋ ಮಂದಿ ಕೆಚ್ಚೆದೆಯ ಹೋರಾಟದ ಮೂಲಕ ತಮ್ಮ ಪ್ರಾಣ ಅರ್ಪಿಸಿದ್ದಾರೆ. ಕೆಲವರು ಎಲೆಮರೆ ಕಾಯಿಯಂತೆ ಒಂದೆರಡು ವರ್ಷಗಳಲ್ಲೇ ಅಸಾಮಾನ್ಯ ಪ್ರತಿರೋಧದ ಬಳಿಕ ಹುತಾತ್ಮರಾಗಿದ್ದಾರೆ. ಅಂತವರ ಸಾಲಿನಲ್ಲಿ ನಿಲ್ಲುತ್ತಾರೆ ಸ್ವಾತಂತ್ರ್ಯ ಹೋರಾಟಗಾರ ತಮಿಳುನಾಡಿನ 25 ವರ್ಷದ ಯುವಕ ವಾಂಚಿನಾಥನ್.
ಅದು 1911ರ ಜೂನ್ 17. ತಿರುನಲ್ವೇಲಿ ಕಲೆಕ್ಟರ್ ರಾಬರ್ಟ್ ವಿಲಿಯಂ ಡಿ ಎಸ್ಕಾರ್ಟ್ ಆಶ್ ತಮ್ಮ ಪತ್ನಿ ಮೇರಿಯೊಂದಿಗೆ ಕೊಡೈಕೆನಾಲ್‌ನಲ್ಲಿ ಓದುತ್ತಿದ್ದ ತಮ್ಮ ಮಕ್ಕಳನ್ನು ನೋಡಲು ಬೋಟ್ ಮೇಲ್ ರೈಲಿನ ಮೊದಲ ದರ್ಜೆಯ ಕಂಪಾರ್ಟ್‌ಮೆಂಟ್‌ನಲ್ಲಿ ಪ್ರಯಾಣಿಸುತ್ತಿದ್ದರು. ಇವರ ಕಾವಲುಗಾರ ನೀರು ತರಲು ಹೋಗಿದ್ದಾಗ ಈ ಕಂಪಾರ್ಟ್‌ಮೆಂಟ್‌ಗೆ ಏಕಾಏಕಿ ನುಗ್ಗಿದ ಪ್ರಯಾಣಿಕ 3 ಬಾರಿ ಗುಂಡು ಹಾರಿಸಿ ಬಳಿಕ ಬೂದಿಹಾಳ ರೈಲ್ವೆ ನಿಲ್ದಾಣ ಬಳಿಯ ಶೌಚಾಲಯದಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗೆ ಬ್ರಿಟಿಷ್ ಕಲೆಕ್ಟರ್ ಮೇಲೆ ಗುಂಡು ಹಾರಿಸಿದ್ದು ಬೇಱರು ಅಲ್ಲ, ಆತನೇ ವಾಂಚಿನಾಥನ್.
ತಿರುನೆಲ್ವೇಲಿ ಸಮೀಪದ ಸೆಂಗೊಟ್ಟೈ ಪಟ್ಟಣದಲ್ಲಿ ಜನಿಸಿದ ವಾಂಚಿನಾಥನ್ ಇಲ್ಲೇ ಪ್ರಾಥಮಿಕ ಶಿಕ್ಷಣ ಪಡೆದುಕೊಂಡಿದ್ದ. ಬಳಿಕ ತಿರುವನಂತಪುರಂನಲ್ಲಿ ಉತನ್ನ ಶಿಕ್ಷಣ ಪೂರ್ಣಗೊಳಿಸಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾಗಲೇ ಸ್ವಾತಂತ್ರ್ಯ ಹೋರಾಟಗಾರರಿಂದ ಪ್ರೇರಿತನಾಗಿ ಆಗ ತಾನೇ ತೀವ್ರಗೊಳ್ಳುತ್ತಿದ್ದ ಪ್ರತಿಭಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸಾವರ್ಕರ್ ಅವರ ಅಭಿನವ ಭಾರತ್ ಸಂಸ್ಥೆಯ ಶಾಖೆ ಅಯ್ಯರ್ ಅವರ ಭಾರತ್ ಮಾತಾ ಸಂಘಟನೆಯ ಮೂಲಕ ಶಸ್ತ್ರಾಸ್ತ್ರ ತರಬೇತಿ ಪಡೆದು ಹೋರಾಟದಲ್ಲಿ ಮತ್ತಷ್ಟು ಸಕ್ರಿಯರಾದರು.