ಹೈದರಾಬಾದ್:ಬ್ರಿಟಿಷರ ಗುಲಾಮಗಿರಿಯಿಂದ ದೇಶವನ್ನ ಮುಕ್ತಗೊಳಿಸಲು ಅದೆಷ್ಟೋ ಕ್ರಾಂತಿಕಾರಿಗಳು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅದರಲ್ಲಿ ಚಂದ್ರಶೇಖರ್ ಆಜಾದ್ ಕೂಡ ಒಬ್ಬರು. '' ಶತ್ರುಗಳ ಗುಂಡಿಗೆ ಎದೆಕೊಟ್ಟು ಹೋರಾಡುತ್ತೇನೆ. ನಾನು ಸ್ವತಂತ್ರನಾಗಿದ್ದೇನೆ. ಸ್ವತಂತ್ರನಾಗಿಯೇ ಇರುತ್ತೇನೆ'' ಎಂದು ಬಿಟೀಷರ ವಿರುದ್ಧ ಗುಡುಗಿದ್ದ ಆಜಾದ್ ಅವರ ಈ ಘೋಷಣೆ ಹೋರಾಟದಲ್ಲಿ ಪಾಲ್ಗೊಂಡಿದ್ದ ಯುವಕರಲ್ಲಿ ಉತ್ಸಾಹ ದುಪ್ಪಟ್ಟಾಗಿಸಿತ್ತು. ಇವರ ಜೀವನ ಮಾತ್ರವಲ್ಲ..ಸಾವು ಕೂಡ ಭಾರತದ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮಹಾಕ್ರಾಂತಿಗೆ ಕಾರಣವಾಯಿತು.
1906ರ ಜುಲೈ 23 ರಂದು ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯಲ್ಲಿ ಜನಿಸಿದ ಆಜಾದ್ ಅವರ ಮೂಲ ಹೆಸರು ಚಂದ್ರಶೇಖರ್ ಸೀತಾರಾಮ್ ತಿವಾರಿ. ಕೇವಲ 15ನೇ ವಯಸ್ಸಿನಲ್ಲಿ ಮಹಾತ್ಮ ಗಾಂಧಿಯವರ ಅಸಹಕಾರ ಚಳವಳಿಗೆ ಕೈ ಜೋಡಿಸಿದ್ರು. 1920-22ರ ಅವಧಿಯಲ್ಲಿ ಬನಾರಸ್‌ನ ಅಂದರೆ ಈಗಿನ ವಾರಣಾಸಿಯಲ್ಲಿ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಆಜಾದ್ ಅವರನ್ನು ಬಂಧಿಸಿದ ಪೊಲೀಸರು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು. ಆಗ ಅವರು ತಮ್ಮ ಹೆಸರನ್ನು 'ಆಜಾದ್', ತಂದೆಯ ಹೆಸರು 'ಆಜಾದಿ' ಅಂದರೆ ಸ್ವಾತಂತ್ರ್ಯ ಹಾಗೂ ವಿಳಾಸವನ್ನು 'ಜೈಲು' ಎಂದು ಉಲ್ಲೇಖಿಸಿದ್ರು.
ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಜೈಲು ಸೇರದಿದ್ದರೂ ಪೊಲೀಸರು ಚಂದ್ರಶೇಖರ್ ಆಜಾದ್ ಅವರನ್ನು ಥಳಿಸಿದ್ದರು. 1922ರ ಫೆಬ್ರವರಿಯಲ್ಲಿ ಚೌರಿ ಚೌರಾದಲ್ಲಿ ಜನಸಮೂಹದಲ್ಲಿದ್ದ ಕ್ರಾಂತಿಕಾರಿಗಳು ಹಲವು ಪೊಲೀಸರನ್ನು ಕೊಂದರು. ಆಗ ಮಹಾತ್ಮ ಗಾಂಧಿಯವರು ಅಸಹಕಾರ ಚಳುವಳಿ ಸ್ಥಗಿತಗೊಳಿಸಿದರು. ಹೀಗಾಗಿ ನಿರಾಸೆಗೊಂಡ ಆಜಾದ್ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್ ಸಂಘ ಸ್ಥಾಪಿಸಿದರು. ಇಲ್ಲಿಂದ ಮುಂದೆ ಆಜಾದ್ ಕ್ರಾಂತಿಕಾರಿಯಾದರು.
75ನೇ ಸ್ವಾತಂತ್ರೋತ್ಸವ: ಬ್ರಿಟಿಷರನ್ನ ನಡುಗಿಸಿದ್ದ ಚಂದ್ರಶೇಖರ್ ಆಜಾದ್ ಸ್ವಾತಂತ್ರ್ಯದ ಹೋರಾಟ ನಿಜಕ್ಕೂ ರೋಮಾಂಚನಕಾರಿ ಬ್ರಿಟಿಷರಿಗೆ ಶರಣಾಗುವ ಬದಲು ಆಜಾದ್ ಮಾಡಿದ್ದೇನು?
1925ರ ಆಗಸ್ಟ್ 9 ರಂದು ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ,ಬ್ರಿಟಿಷರ ವಿರುದ್ಧದ ತನ್ನ ಸಶಸ್ತ್ರ ಹೋರಾಟಕ್ಕಾಗಿ ಹಣ ಪಡೆಯಲು ಕಾಕೋರಿ ರೈಲಿನಲ್ಲಿ ದರೋಡೆ ನಡೆಸಿತು. ಇದರಿಂದ ದಿಗ್ಭ್ರಮೆಗೊಂಡ ಬ್ರಿಟಿಷ್ ಆಡಳಿತ ದರೋಡೆಯ ಹಿಂದಿನ ಕೈಗಳನ್ನ ಪತ್ತೆಹಚ್ಚಿತ್ತು. 1931ರ ಫೆಬ್ರವರಿ 27 ರಂದು ಆಜಾದ್ ತಮ್ಮ ಬೆಂಬಲಿಗರೊಂದಿಗೆ ಪ್ರಯಾಗರಾಜ್‌ನ ಆಲ್ಫ್ರೆಡ್ ಪಾರ್ಕ್‌ನಲ್ಲಿ ಚಳವಳಿ ಆಯೋಜಿಸುತ್ತಿದ್ದಾಗ ಬ್ರಿಟಿಷರು ಅವರನ್ನು ಸುತ್ತುವರೆದರು. ಪೊಲೀಸ್-ಆಜಾದ್ ನಡುವೆ ಎನ್‌ಕೌಂಟರ್ ನಡೆಯಿತು. ಕೊನೆಗೆ ಬ್ರಿಟಿಷರಿಗೆ ಶರಣಾಗದೆ ''ಆಜಾದ್ ಹೀ ರಹೇಂಗೆ.. ಆಜಾದ್ ಹೀ ಮರೇಂಗೆ'' ಎನ್ನುತ್ತ ಚಂದ್ರಶೇಖರ ಆಜಾದ್ ಅವರು ತಮ್ಮ ಕೈಯಲ್ಲಿದ್ದ ಗನ್‌ನಲ್ಲಿದ್ದ ಕೊನೆಯ ಬುಲೆಟ್ ಅನ್ನು ತಲೆಗೆ ಹಾರಿಸಿಕೊಂಡು ಹುತಾತ್ಮರಾದರು..
ಚಂದ್ರಶೇಖರ ಆಜಾದ್ ಅವರ ಪಿಸ್ತೂಲ್ ಅನ್ನು ಬ್ರಿಟಿಷ್ ಅಧಿಕಾರಿಗಳು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋಗಿದ್ದರು. ಆದರೆ ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ 1976ರ ಜುಲೈ 3 ರಂದು ಆ ಪಿಸ್ತೂಲ್ ಅನ್ನು ದೇಶಕ್ಕೆ ತರಲಾಯಿತು. ಅಲ್ಫ್ರೆಡ್ ಪಾರ್ಕ್‌ನಲ್ಲಿ ನಿರ್ಮಿಸಲಾಗಿರುವ ಅಲಹಾಬಾದ್ ಮ್ಯೂಸಿಯಂನಲ್ಲಿ ಅದನ್ನು ಸುರಕ್ಷಿತವಾಗಿ ಇರಿಸಲಾಯಿತು.
ಚಂದ್ರಶೇಖರ್ ಆಜಾದ್ ಅವರ ಶೌರ್ಯದ ಬಗ್ಗೆ ಅನೇಕ ಕಥೆಗಳಿವೆ. ಇವು ಬಹಳ ಸ್ಫೂರ್ತಿದಾಯಕ.. ಇಂದಿಗೂ ಯುವಜನರಲ್ಲಿ ದೇಶಭಕ್ತಿಯ ಅಲೆಯನ್ನು ಹುಟ್ಟುಹಾಕುತ್ತವೆ. ಇವರ ಶೌರ್ಯದಿಂದಾಗಿ ಚಂದ್ರಶೇಖರ ಆಜಾದ್ ಇಂದಿಗೂ ಜನರ ಹೃದಯದಲ್ಲಿ ಮತ್ತು ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಶಾಶ್ವತವಾಗಿ ಚಿರಸ್ಥಾಯಿಯಾಗಿದ್ದಾರೆ.
ಇದನ್ನೂ ಓದಿ:ಸುಭಾಷ್ ಚಂದ್ರ ಬೋಸರಿಗೆ ಬ್ರಿಟೀಷರ ಬ್ರೇಕ್‌ಫಾಸ್ಟ್ ಬ್ರೆಡ್ ಇಷ್ಟವಾಗಿತ್ತು, ಯಾಕೆ ಗೊತ್ತೇ?