ನವದೆಹಲಿ:ಕೋವಿಡ್ ಎರಡನೇ ಅಲೆ ವೇಳೆ ಸುಮಾರು 724 ಮಂದಿ ವೈದ್ಯರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ತಿಳಿಸಿದೆ. ಇದೇ ವೇಳೆ ವೈದ್ಯರ ಮೇಲೆ ದೇಶದ ಹಲವೆಡೆ ಹಲ್ಲೆಗಳಾಗುತ್ತಿರುವುದನ್ನು ಖಂಡಿಸಿ ಜೂನ್ 18ರಂದು ಪ್ರತಿಭಟನೆ ನಡೆಸುವುದಾಗಿ ಹೇಳಿದೆ.
ಈ ಕುರಿತು ಮಾತನಾಡಿರುವ ಐಎಂಎ ಅಧ್ಯಕ್ಷ ಡಾ. ಜೆ.ಎ.ಜಯಲಾಲ್, ಕಳೆದ ಎರಡು ವಾರಗಳಲ್ಲಿ ಅಸ್ಸಾಂ, ಬಿಹಾರ, ಪಶ್ಚಿಮ ಬಂಗಾಳ, ದೆಹಲಿ, ಉತ್ತರ ಪ್ರದೇಶ, ಕರ್ನಾಟಕ ಸೇರಿ ಹಲವು ಭಾಗಗಳಲ್ಲಿ ವೈದ್ಯರ ಮೇಲೆ ಹಲ್ಲೆಗಳಾಗುತ್ತಿರುವುದು ತುಂಬಾ ಬೇಸರದ ಸಂಗತಿಯಾಗಿದೆ. ಈ ವೇಳೆ ವೈದ್ಯರು ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ ಎಂದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿ ದಿನಕ್ಕೆ ಒಂದು ಬಾರಿಯಾದರೂ ವೈದ್ಯರ ಮೇಲೆ ಹಲ್ಲೆಯಾಗುತ್ತಿದೆ ಎಂದು ಆರೋಪಿಸಿದ ಜಯಲಾಲ್, ವೈದ್ಯರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಪ್ರಧಾನಮಂತ್ರಿ, ಕೇಂದ್ರ ಮಂತ್ರಿ, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.