ಹಮೀರ್ಪುರ(ಹಿಮಾಚಲ ಪ್ರದೇಶ): ಸಣ್ಣ-ಪುಟ್ಟ ವಿಚಾರಕ್ಕೂ ಗಂಡ-ಹೆಂಡತಿ ಜಗಳ ಮಾಡಿಕೊಂಡು ಬೇರೆ ಬೇರೆ ಆಗುವ ಅನೇಕ ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಇವುಗಳ ಮಧ್ಯೆ ಕೆಲ ಆದರ್ಶ ಸತಿ-ಪತಿ ತೆಗೆದುಕೊಳ್ಳುವ ಕೆಲವೊಂದು ನಿರ್ಧಾರ ಎಲ್ಲರಿಗೂ ಸ್ಫೂರ್ತಿ ಆಗುತ್ತವೆ. ಸದ್ಯ ನಾವು ಹೇಳಲು ಹೊರಟಿರುವ ಸ್ಟೋರಿ ಕೂಡ ಅಂತಹದ್ದೇ. ಕಟ್ಟಿಕೊಂಡ ಪತ್ನಿಯ ಕೊನೆಯ ಆಸೆ ಈಡೇರಿಸಲು ಪತಿಯೋರ್ವ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರಕ್ಕೆ ದಾನ ಮಾಡುವ ಮೂಲಕ ಮಾದರಿ ಆಗಿದ್ದಾರೆ.
ಹೆಂಡತಿ ಕೊನೆ ಆಸೆಯಂತೆ ಕೋಟ್ಯಂತರ ರೂ. ಮೌಲ್ಯದ ಆಸ್ತಿ ದಾನ ಹಿಮಾಚಲ ಪ್ರದೇಶದ ಹಮೀರ್ಪುರದಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ಪತ್ನಿಯ ಕೊನೆ ಆಸೆ ಈಡೇರಿಸಲು ತನ್ನ ಆಸ್ತಿಯನ್ನೆಲ್ಲಾ ಸರ್ಕಾರಕ್ಕೆ ನೀಡಿದ್ದಾಗಿ ತಿಳಿದು ಬಂದಿದೆ.
ಏನಿದು ಸ್ಟೋರಿ?
ಹಮೀರ್ಪುರದ ಜೋಳಸಪ್ಪಾಡ್ ಪಂಚಾಯತ್ ವ್ಯಾಪ್ತಿಯಲ್ಲಿ 72 ವರ್ಷದ ಡಾ. ರಾಜೇಂದ್ರ ಕನ್ವರ್ ವಾಸವಾಗಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವ ಇವರು ಕಳೆದ ಕೆಲ ವರ್ಷಗಳ ಹಿಂದೆ ನಿವೃತ್ತಿ ಪಡೆದುಕೊಂಡಿದ್ದಾರೆ. ಇವರ ಪತ್ನಿ ಕೃಷ್ಣ ಕನ್ವರ್ ಕೂಡ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದು, ಕಳೆದ ವರ್ಷ ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.
ಇವರಿಗೆ ಮಕ್ಕಳಿಲ್ಲದ ಕಾರಣ ತಮ್ಮ ಹೆಸರಿನಲ್ಲಿದ್ದ ಚರ ಮತ್ತು ಸ್ಥಿರಾಸ್ತಿಯನ್ನು ಸರ್ಕಾರಕ್ಕೆ ದಾನ ಮಾಡಲು ಕೃಷ್ಣ ಕನ್ವರ್ ಇಷ್ಟಪಟ್ಟಿದ್ದರು. ಪತ್ನಿಯ ಕೊನೆಯ ಆಸೆಯಂತೆ ಡಾ. ರಾಜೇಂದ್ರ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ವರ್ಗಾವಣೆ ಮಾಡಿದ್ದಾರೆ.
ಇದನ್ನೂ ಓದಿರಿ:ತೀವ್ರ ನಿಗಾ ಘಟಕದಲ್ಲೇ ಲತಾ ಮಂಗೇಶ್ಕರ್ಗೆ ಚಿಕಿತ್ಸೆ ಮುಂದುವರಿಕೆ : ಆಸ್ಪತ್ರೆ ವೈದ್ಯರು
ಕೃಷ್ಣ-ರಾಜೇಂದ್ರ ಎಂಬ ಹೆಸರಿನಲ್ಲಿ ವೃದ್ಧಾಶ್ರಮ ಕಟ್ಟಲು 2 ಕೋಟಿ ರೂ. ಮೌಲ್ಯದ ಎರಡು ಅಂತಸ್ತಿನ ಮನೆ ಹಾಗೂ ಲಕ್ಷಾಂತರ ರೂ. ಬೆಲೆ ಬಾಳುವ ಕಾರನ್ನು ಇದೀಗ ಸರ್ಕಾರಕ್ಕೆ ದಾನವಾಗಿ ನೀಡುತ್ತಿದ್ದು, ಇದರ ಜೊತೆಗೆ ನಾಲ್ಕು ಗುಂಟೆ ಜಮೀನು ಸಹ ನೀಡಲು ಮುಂದಾಗಿದ್ದಾರೆ. ತಾವು ಬಳಸುತ್ತಿದ್ದ ಕಾರನ್ನ ವೃದ್ಧರ ಸೇವೆಗೆ ಬಳಕೆ ಮಾಡುವಂತೆ ಡಾ. ಕನ್ವರ್ ಮನವಿ ಮಾಡಿದ್ದಾರೆ.