ವಯನಾಡ್: 7 ವರ್ಷಗಳ ಹಿಂದೆ 700 ರೂಪಾಯಿ ಮೌಲ್ಯದ ವಸ್ತುಗಳನ್ನು ಕದ್ದಿದ್ದವನೊಬ್ಬ, ಈಗ ಅದರ ಬದಲಾಗಿ 2000 ರೂಪಾಯಿ ಮರಳಿಸಿದ್ದು ಕುತೂಹಲಕರವಾಗಿದೆ. ವಸ್ತು ಹಾಗೂ ಹಣ ಮಾತ್ರವಲ್ಲದೇ ಆ ವ್ಯಕ್ತಿಯ ಪತ್ನಿಯ ಹೆಸರಲ್ಲಿ ಕ್ಷಮಾಪಣಾ ಪತ್ರವನ್ನೂ ಬರೆದಿರುವ ಕಳ್ಳ, ವಸ್ತುಗಳನ್ನು ತೆಗೆದುಕೊಂಡು ತನ್ನನ್ನು ಕ್ಷಮಿಸಬೇಕೆಂದು ಕೇಳಿಕೊಂಡಿದ್ದಾನೆ. ಇಂಥದೊಂದು ವಿಚಿತ್ರ ಘಟನೆ ವಯನಾಡಿನ ಪುಲಪಲ್ಲಿಯಲ್ಲಿ ನಡೆದಿದೆ. ವಸ್ತುಗಳೊಂದಿಗೆ ಬರೆದ ಪತ್ರದಲ್ಲಿ ಬರೆದವರ ಹೆಸರನ್ನು ನಮೂದಿಸಲಾಗಿಲ್ಲ.
ಪತ್ರದ ಒಕ್ಕಣೆ ಹೀಗಿದೆ:ಡಿಯರ್ ಮೇರಿ ಸಹೋದರಿ, ಹಲವಾರು ವರ್ಷಗಳ ಹಿಂದೆ ನಾನು ಹಿರಿಯ ಸಹೋದರ ಜೋಸೆಫ್ ಅವರಿಂದ ನಾನು 700 ರೂಪಾಯಿ ಮೌಲ್ಯದ ಕೆಲ ವಸ್ತುಗಳನ್ನು ಕಳವು ಮಾಡಿದ್ದೆ. ಈಗ ಆ ವಸ್ತುಗಳ ಮೌಲ್ಯ 2000 ರೂಪಾಯಿಗಳಾಗಬಹುದು. ನಾನು ಆ ಹಣವನ್ನು ಈ ಪತ್ರದೊಂದಿಗೆ ಕಳುಹಿಸುತ್ತಿದ್ದೇನೆ. ದಯವಿಟ್ಟು ಈ ಹಣ ತೆಗೆದುಕೊಂಡು ನನ್ನನ್ನು ಕ್ಷಮಿಸಿಬಿಡಿ.
ಪುಲಪಲ್ಲಿ ಹತ್ತಿರದ ಪೆರಿಕಲ್ಲೂರ ಪಟ್ಟನಿಕೂಪ ನಿವಾಸಿ ಮೇರಿ ಅವರು ಬುಧವಾರ ತಮಗೆ ಬಂದ ಪತ್ರ ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ತನ್ನ ಮಕ್ಕಳಿಂದ ಕ್ರಿಸ್ಮಸ್ ಹಬ್ಬದಲ್ಲಿ ಕಾರ್ಡ್ ಬರುವುದು ಬಿಟ್ಟರೆ ಪೋಸ್ಟ್ ಮೂಲಕ ಮತ್ತೇನೂ ಅವರಿಗೆ ಯಾವತ್ತೂ ಬಂದಿರಲಿಲ್ಲ. ಪತ್ರ ಬರೆದವರ ಹೆಸರು ಕವರ್ ಮೇಲೆ ಇರದಿರುವುದು ಒಂದಿಷ್ಟು ಸಂಶಯ ಮೂಡಿಸಿದರೂ ಕೊನೆಗೆ ಪತ್ರ ಓದುವುದೇ ಸರಿ ಎಂದು ತೆರೆದು ನೋಡಿದ್ದಾರೆ. ಕವರ್ನಲ್ಲಿ ಪತ್ರದೊಂದಿಗೆ 2000 ರೂಪಾಯಿ ಹಣ ಕೂಡ ಇರುವುದನ್ನು ನೋಡಿ ಅವರು ಒಂದು ಕ್ಷಣ ಅವಾಕ್ಕಾಗಿದ್ದಾರೆ.
ಮನಪರಿವರ್ತನೆ ಮಾಡಿಕೊಂಡ ಕಳ್ಳನನ್ನು ತಾನು ಕ್ಷಮಿಸಿರುವೆ, ಆದರೆ ಈ ವಿಷಯವನ್ನು ಆತನಿಗೆ ಹೇಳಲಾಗುತ್ತಿಲ್ಲವಲ್ಲ ಎಂಬ ನೋವಿದೆ ಎಂದು ಮೇರಿ ಹೇಳಿದರು. ಹತ್ತು ವರ್ಷಗಳ ಹಿಂದೆಯೇ ಮೇರಿ ಅವರ ಪತಿ ತೀರಿಕೊಂಡಿರುವುದರಿಂದ ಈ ಮನಪರಿವರ್ತನೆಯಾದ ಕಳ್ಳ ಯಾರೆಂಬುದನ್ನು ಕಂಡು ಹಿಡಿಯಲು ಅವರಿಂದ ಈಗ ಸಾಧ್ಯವಾಗುತ್ತಿಲ್ಲ. ಉಳಿದ ಕಳ್ಳರು ಸಹ ಇದೇ ರೀತಿ ಮನಪರಿವರ್ತನೆ ಮಾಡಿಕೊಳ್ಳಲಿ ಎಂದು ಮೇರಿ ಆಶಿಸಿದ್ದಾರೆ.