ಅಲ್ವಾರ್(ರಾಜಸ್ಥಾನ):ಪ್ರತಿಯೊಬ್ಬರಿಗೂತಂದೆ-ತಾಯಿಯಾಗಬೇಕೆಂಬ ಆಸೆ, ಕನಸು ಸಹಜ. ಆದರೆ, ಕೆಲ ದಂಪತಿಗೆ ಆ ಭಾಗ್ಯ ಸಿಗುವುದಿಲ್ಲ. ಇನ್ನೂ ಕೆಲವರಿಗೆ ಸ್ವಲ್ಪ ತಡವಾಗಿ ಮಕ್ಕಳಾಗುತ್ತವೆ. ಆದರೆ, ರಾಜಸ್ಥಾನದಲ್ಲಿ ವಿಭಿನ್ನ ಘಟನೆಯೊಂದು ನಡೆದಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟು 54 ವರ್ಷಗಳ ಬಳಿಕ ಇಲ್ಲಿನ ವೃದ್ಧ ದಂಪತಿಗೆ ಗಂಡು ಮಗುವಿನ ಜನಿಸಿದೆ. ನವಜಾತ ಶಿಶು ಸಂಪೂರ್ಣವಾಗಿ ಆರೋಗ್ಯವಾಗಿದೆ. ಮಾಜಿ ಸೈನಿಕನ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ. ಮಗುವಿಗೆ ಜನ್ಮ ನೀಡಿರುವ ಮಹಿಳೆಯ ವಯಸ್ಸು 70, ಗಂಡನಿಗೆ 75 ವರ್ಷ ವಯಸ್ಸಾಗಿದೆ.
ಇದನ್ನೂ ಓದಿ:ಐವಿಎಫ್ ಚಿಕಿತ್ಸೆ ಮೂಲಕ ನಾಲ್ಕು ಮಕ್ಕಳಿಗೆ ಜನ್ಮ ಕೊಟ್ಟ 40 ವರ್ಷದ ಮಹಿಳೆ,ಇದು ನಿಜಕ್ಕೂ ಪರಮಾಶ್ಚರ್ಯ!
ದೇಶ ಸೇವೆ ಮಾಡಿರುವ ಮಾಜಿ ಯೋಧ ಗೋಪಿಚಂದ್ ಅವರಿಗೆ ಮದುವೆಯಾಗಿ ಐದು ದಶಕ ಕಳೆದರೂ ಮಕ್ಕಳಾಗಿರಲಿಲ್ಲ. ಇದೀಗ ಕೃತಕ ಗರ್ಭಧಾರಣೆಯ (IVF) ಮೂಲಕ ಅವರು ತಂದೆಯಾಗಿದ್ದಾರೆ. ಮನೆಯಲ್ಲಿ ಮಗುವಿನ ಅಳು ಕೇಳಲು ಶುರುವಾಗಿದ್ದು, ಕುಟುಂಬದ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಗೋಪಿಚಂದ್ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಬಾಂಗ್ಲಾದೇಶದೊಂದಿಗೆ ಯುದ್ಧ ಘೋಷಣೆಯಾಗಿತ್ತು. ಈ ಸಂದರ್ಭದಲ್ಲಿ ಅವರ ಕಾಲಿಗೆ ಗುಂಡು ತಗುಲಿದೆ. 1983ರಲ್ಲಿ ಇವರು ಸೇನೆಯಿಂದ ನಿವೃತ್ತರಾಗುತ್ತಾರೆ. 1968ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮಗುವಿಗೋಸ್ಕರ ಆಸೆ ಕಂಗಳಿಂದ ಕಾಯುತ್ತಿದ್ದರು. ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಇವರಲ್ಲಿ ಕೆಲವೊಂದು ದೈಹಿಕ ನ್ಯೂನತೆಗಳಿರುವುದು ಕಂಡುಬಂದಿದೆ. ಇದೀಗ ಐವಿಎಫ್ ತಂತ್ರಜ್ಞಾನದ ಮೂಲಕ ಕೊನೆಗೂ ಮಗು ಪಡೆದು ದಂಪತಿ ಖುಷಿಯಲ್ಲಿದ್ದಾರೆ.