ರೇವಾರಿ: ಹರಿಯಾಣದ ರೇವಾರಿ ಜಿಲ್ಲೆಯ ಬವಾಲ್ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. 13 ವರ್ಷಗಳ ಹಿಂದೆ ಸತ್ತಿದ್ದಾನೆ ಎಂದು ಸರ್ಕಾರಿ ದಾಖಲೆಗಳಲ್ಲಿ ಘೋಷಿಸಲಾದ 70 ವರ್ಷದ ವ್ಯಕ್ತಿ ಜೀವಂತವಾಗಿ ಇರುವುದು ತಿಳಿದು ಬಂದಿದೆ. ವಾಸ್ತವವಾಗಿ ಈ ವಯಸ್ಸಾದ ವ್ಯಕ್ತಿ ಜೀವಂತವಾಗಿದ್ದಾನೆ, ಆದರೆ, ಸರ್ಕಾರಿ ದಾಖಲೆಗಳಲ್ಲಿ ಆತ ಮೃತಪಟ್ಟಿದ್ದಾಗಿ 13 ವರ್ಷಗಳ ಕಾಲ ಘೋಷಿಸಲಾಗಿತ್ತು. ಕೊನೆಗೂ ನಿನ್ನೆ ದಿನ ಆ ವೃದ್ಧ ಬದುಕಿರುವುದಾಗಿ ತಿಳಿದು ಬಂದಿದೆ. ಬಿಜೆಪಿಯ ವಿಕಾಸ್ ಭಾರತ್ ಸಂಕಲ್ಪ ಯಾತ್ರೆ ವೇಳೆ ಸಹಕಾರಿ ಸಚಿವ ಡಾ.ಬನ್ವಾರಿ ಲಾಲ್ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಗ್ರಾಮಕ್ಕೆ ತೆರಳಿದಾಗ ಈ ವಿಷಯ ಬೆಳಕಿಗೆ ಬಂದಿದೆ.
13 ವರ್ಷ ಬದುಕಿದ್ದಕ್ಕೆ ಪುರಾವೆ: ಸರ್ಕಾರಿ ದಾಖಲೆಗಳಲ್ಲಿ ವೃದ್ಧ ಮರಣ ಹೊಂದಿದ್ದಾನೆ ಎಂದು ದಾಖಲಿಸಲಾಗಿದೆ. ಇದರಿಂದಾಗಿ ಅವರು ಕಳೆದ 13 ವರ್ಷಗಳಿಂದ ತೊಂದರೆ ಅನುಭವಿಸಿದ್ದು, ಜೀವಂತವಾಗಿರುವ ಬಗ್ಗೆ ಪುರಾವೆಗಳನ್ನು ಪ್ರಸ್ತುತಪಡಿಸಲು ನಿತ್ಯವೂ ಸರ್ಕಾರಿ ಕಚೇರಿಗಳನ್ನು ಸುತ್ತುತ್ತಿದ್ದರು. ಸರ್ಕಾರಿ ದಾಖಲೆಗಳಲ್ಲಿ ಸತ್ತಿದ್ದಾನೆ ಎಂದು ದಾಖಲಿಸಿದ್ದರಿಂದ ಸರ್ಕಾರದ ಯೋಜನೆಗಳಿಂದಲೂ ವಂಚಿತರಾಗಿದ್ದರು. ಇದರಿಂದ ವೃದ್ಧ ಚಿಂತಾಕ್ರಾಂತರಾಗಿದ್ದರು.
ವೃದ್ಧ ಬದುಕಿದ್ದಾನೆ ಎಂದು ಘೋಷಣೆ: ಮಾಹಿತಿ ಪ್ರಕಾರ, ಗುರುವಾರ ಖೇಡ ಮುರಾರ್ ಗ್ರಾಮಕ್ಕೆ ತಲುಪಿದ ವಿಕಾಸ್ ಭಾರತ ಸಂಕಲ್ಪ ಯಾತ್ರೆಯಲ್ಲಿ ಅವರು ಜೀವಂತವಾಗಿರುವುದಕ್ಕೆ ಸಾಕ್ಷಿಗಳು ಕಂಡುಬಂದಿವೆ. ಯಾತ್ರೆ ಉದ್ಘಾಟಿಸಲು ಬಂದಿದ್ದ ರಾಜ್ಯ ಸಹಕಾರ ಸಚಿವ ಡಾ.ಬನ್ವಾರಿ ಲಾಲ್ ಅವರನ್ನು ವೇದಿಕೆಗೆ ಕರೆದು, ಸರ್ಕಾರಿ ದಾಖಲೆಯಲ್ಲಿ ಮೃತನೆಂದು ದಾಖಲಾಗಿರುವ ವೃದ್ಧ ಬದುಕಿದ್ದಾರೆ ಎಂದು ಸಾರ್ವಜನಿಕವಾಗಿ ಘೋಷಿಸಿದರು.