ಕರ್ನಾಲ್ (ಹರಿಯಾಣ): ಬ್ರಿಟಿಷರ ಆಳ್ವಿಕೆಗಿಂತ ಮೊದಲು ಭಾರತದ ಜನಸಂಖ್ಯೆಯ ಶೇಕಡಾ 70 ರಷ್ಟು ಜನ ವಿದ್ಯಾವಂತರಾಗಿದ್ದರು. ಆಗ ದೇಶದಲ್ಲಿ ನಿರುದ್ಯೋಗ ಸಮಸ್ಯೆಯೂ ಇರಲಿಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ. ಇಂದ್ರಿ-ಕರ್ನಾಲ್ ರಸ್ತೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನೆಯ ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಭಾಗವತ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬ್ರಿಟಿಷರ ಆಳ್ವಿಕೆಗೆ ಮೊದಲು, ನಮ್ಮ ದೇಶದ ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ವಿದ್ಯಾವಂತರಾಗಿದ್ದರು ಮತ್ತು ನಿರುದ್ಯೋಗ ಇರಲಿಲ್ಲ. ಆದರೆ, ಆಗ ಇಂಗ್ಲೆಂಡ್‌ನಲ್ಲಿ ಕೇವಲ ಶೇಕಡಾ 17 ರಷ್ಟು ಜನರು ಮಾತ್ರ ವಿದ್ಯಾವಂತರಾಗಿದ್ದರು ಎಂದು ಮೋಹನ್ ಭಾಗವತ್ ಹೇಳಿದರು. ಬ್ರಿಟಿಷರು ಭಾರತದಲ್ಲಿ ತಮ್ಮ ಶಿಕ್ಷಣ ಮಾದರಿ ಜಾರಿಗೆ ತಂದರು ಮತ್ತು ಅವರ ದೇಶದಲ್ಲಿ ನಮ್ಮ ಮಾದರಿಯನ್ನು ಜಾರಿಗೊಳಿಸಿದರು. ಇದರಿಂದ ಅವರು ಶೇಕಡಾ 70 ರಷ್ಟು ವಿದ್ಯಾವಂತರಾದರು ಮತ್ತು ನಾವು ಶೇಕಡಾ 17 ರಷ್ಟು ವಿದ್ಯಾವಂತರಾಗಿದ್ದೇವೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದರು.
ನಮ್ಮ ಶಿಕ್ಷಣ ವ್ಯವಸ್ಥೆಯು ಉದ್ಯೋಗಕ್ಕಾಗಿ ಮಾತ್ರವಲ್ಲ, ಜ್ಞಾನದ ಮಾಧ್ಯಮವೂ ಆಗಿತ್ತು. ಶಿಕ್ಷಣವು ಅಗ್ಗವಾಗಿತ್ತು ಮತ್ತು ಎಲ್ಲರಿಗೂ ಸಿಗುವಂತಿತ್ತು. ಆದ್ದರಿಂದ ಸಮಾಜವು ಶಿಕ್ಷಣದ ಎಲ್ಲಾ ವೆಚ್ಚ ಭರಿಸಿತ್ತು ಮತ್ತು ಈ ಶಿಕ್ಷಣದಿಂದ ಹೊರಬಂದ ವಿದ್ವಾಂಸರು, ಕಲಾವಿದರು ಮತ್ತು ಕುಶಲಕರ್ಮಿಗಳು ಪ್ರಪಂಚದಾದ್ಯಂತ ಗುರುತಿಸಲ್ಪಟ್ಟಿದ್ದಾರೆ ಎಂದು ಅವರು ಹೇಳಿದರು. ಸಾರ್ವಜನಿಕರಿಗೆ ಆರೋಗ್ಯ ಸೌಲಭ್ಯ ನೀಡುವ ಆಸ್ಪತ್ರೆ ನಿರ್ಮಿಸುವುದು ಸೇರಿದಂತೆ ಆತಮ್ ಮನೋಹರ ಮುನಿ ಆಶ್ರಮ ಮಾಡಿದ ಕಾರ್ಯವನ್ನು ಭಾಗವತ್ ಶ್ಲಾಘಿಸಿದರು.