ನವದೆಹಲಿ: ಭಾರತದ ಯುವ ಜನತೆ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕೆಂಬ ಹೇಳಿಕೆಗೆ ಉದ್ಯಮ ನಾಯಕರು ಮತ್ತು ಸಂಸ್ಥಾಪಕರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಕೆಲಸದ ಸಮಯವನ್ನು ಹೆಚ್ಚಿಸುವುದರಿಂದ ಉತ್ಪಾದಕತೆಯನ್ನು ಹೆಚ್ಚಿಸಬಹುದಾದರೂ, ಕೆಲಸದ ಅವಧಿಯ ಸಮತೋಲನವೂ ಅಷ್ಟೇ ಅಗತ್ಯವಾಗಿದೆ ಎಂಬುದು ಅನೇಕರ ಅಭಿಪ್ರಾಯ.
ಇತ್ತೀಚಿನ ದಶಕಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದ ಹಾಗೂ ಅಭಿವೃದ್ಧಿ ಹೊಂದಿದ ಆರ್ಥಿಕತೆಗಳೊಂದಿಗೆ ಭಾರತ ಸ್ಪರ್ಧಿಸಬೇಕಾದರೆ ಯುವಕರು ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಮೂರ್ತಿ ಪಾಡ್ಕಾಸ್ಟ್ ಒಂದರಲ್ಲಿ ಹೇಳಿದ್ದರು. ಮೂರ್ತಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕ್ರಿಕ್ ಹೀರೋಸ್ ಸಂಸ್ಥಾಪಕ ಅಭಿಷೇಕ್ ದೇಸಾಯಿ, ವಿಸ್ತೃತ ಕೆಲಸದ ಸಮಯವು ಕೆಲ ಸಂದರ್ಭಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಬಹುದಾದರೂ, ಕೆಲಸ ಮತ್ತು ಜೀವನದ ಸಮತೋಲನ, ಉದ್ಯೋಗಿಗಳ ಯೋಗಕ್ಷೇಮ ಮತ್ತು ದಕ್ಷತೆಯನ್ನು ಹೆಚ್ಚಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುವತ್ತ ಗಮನ ಹರಿಸುವುದು ಅಷ್ಟೇ ಮುಖ್ಯ ಎಂದಿದ್ದಾರೆ.
"ಜಪಾನ್ ಮತ್ತು ಜರ್ಮನಿಯಂತಹ ದೇಶಗಳ ಯಶಸ್ಸು ನಿಸ್ಸಂದೇಹವಾಗಿ ಶ್ಲಾಘನೀಯ. ಆದರೆ ಅವರ ಕೆಲಸದ ಸಂಸ್ಕೃತಿಯು ಭಾರತದ ವಿಚಾರದಲ್ಲಿ ಹೊಂದಾಣಿಕೆಯಾಗುವುದಿಲ್ಲ ಎಂಬುದನ್ನು ಸಹ ನಾವು ಗಮನಿಸಬೇಕು" ಎಂದು ದೇಸಾಯಿ ಹೇಳಿದರು. ಭಾರತ್ ಪೇ ಮಾಜಿ ಸಹ-ಸಂಸ್ಥಾಪಕ ಅಶ್ನೀರ್ ಗ್ರೋವರ್ ಮಾತನಾಡಿ, "ಮೂರ್ತಿ ಅವರ ಹೇಳಿಕೆಯಿಂದ ಸಾರ್ವಜನಿಕರು ಅಸಮಾಧಾನಗೊಂಡಿದ್ದಾರೆ. ಮಾಡಿದ ಕೆಲಸ ಎಷ್ಟು ಫಲಿತಾಂಶ ನೀಡಿದೆ ಎನ್ನುವುದಕ್ಕಿಂತ ಎಷ್ಟು ಗಂಟೆ ಕೆಲಸ ಮಾಡಲಾಗಿದೆ ಎಂಬುದಕ್ಕೆ ಮಹತ್ವ ನೀಡಲಾಗುತ್ತಿದೆ" ಎಂದರು.