ತಿರುಪತ್ತೂರು (ತಮಿಳುನಾಡು): ಕರ್ನಾಟಕ ರಾಜ್ಯದ ಧಾರ್ಮಿಕ ತಾಣಗಳ ಪ್ರವಾಸ ಮುಗಿಸಿ ಕೆಲವೇ ಗಂಟೆಗಳಲ್ಲಿ ತಮ್ಮ ಊರು ಸೇರಿಕೊಳ್ಳಬೇಕಿದ್ದ ಪ್ರವಾಸಿಗರ ವಾಹನಕ್ಕೆ ಮತ್ತೊಂದು ವಾಹನ ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ದುರ್ಘಟನೆಯಲ್ಲಿ ಏಳು ಮಂದಿ ಮಹಿಳೆಯರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಿರುಪತ್ತೂರು ಜಿಲ್ಲೆಯ ನಟ್ರಂಪಳ್ಳಿ ಸಮೀಪದ ಚಂಡಿಯೂರಿಯ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಅಪಘಾತ ನಡೆದಿದೆ.
ಸಾವನ್ನಪ್ಪಿದ ಮಹಿಳಾ ಯಾತ್ರಿಕರು ಸೆ.8ರಂದು ಅಂಬೂರು ಪಕ್ಕದ ಓಣಗುಟ್ಟೈ ಗ್ರಾಮದ 45 ಮಂದಿ 2 ವ್ಯಾನ್‌ಗಳ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿದ್ದರು. ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಕಳೆದ ರಾತ್ರಿ ತಮಿಳುನಾಡಿಗೆ ಪ್ರಯಾಣಿಸುತ್ತಿದ್ದರು. ಇಂದು (ಸೆಪ್ಟೆಂಬರ್ 11) ಮುಂಜಾನೆ ಎಲ್ಲರೂ ತಮ್ಮೂರಿಗೆ ತಲುಪುವ ಖುಷಿಯಲ್ಲಿದ್ದರು. ಆದರೆ ನಟ್ರಂಪಳ್ಳಿಯ ಚಂಡಿಯೂರು ಬಳಿ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರವಾಸಿಗರ ವ್ಯಾನ್ ಪಂಕ್ಚರ್ ಆಗಿದೆ. ಟಯರ್ ಬದಲಾಯಿಸಲು ಚಾಲಕ ರಸ್ತೆ ಬದಿಯಲ್ಲಿ ವ್ಯಾನ್ ನಿಲ್ಲಿಸಿದ್ದಾರೆ. ಈ ವೇಳೆ ಕೆಲವರು ವ್ಯಾನ್ನಿಂದ ಇಳಿದು ವಾಹನದ ಪಕ್ಕದಲ್ಲಿ ನಿಂತಿದ್ದರು. ಆಗ ಅದೇ ರಸ್ತೆಯಲ್ಲಿ ವೇಗವಾಗಿ ಬಂದ ಮಿನಿ ಲಾರಿ ವ್ಯಾನ್‌ಗೆ ಡಿಕ್ಕಿ ಹೊಡೆಯಿತು.
ರಸ್ತೆ ಬದಿ ನಿಂತಿದ್ದವರಿಗೆ ಮಿನಿ ಲಾರಿ ಡಿಕ್ಕಿ: ವ್ಯಾನ್ ಮತ್ತು ರಸ್ತೆ ಬದಿ ನಿಂತಿದ್ದ ಜನರಿಗೆ ಮಿನಿ ಲಾರಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಭೀಕರ ಅಪಘಾತದಲ್ಲಿ 7 ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದರು. ಘಟನಾ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ಗಾಯಾಳು ಲಾರಿ ಚಾಲಕ, ಕ್ಲೀನರ್ ಸೇರಿದಂತೆ 10 ಮಂದಿಯನ್ನು ವಾಣಿಯಂಪಾಡಿ, ನಟ್ರಂಪಳ್ಳಿ ಹಾಗೂ ತಿರುಪತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ವೆಲ್ಲೂರು ಮತ್ತು ಕೃಷ್ಣಗಿರಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು.
ಅಪಘಾತ ಸ್ಥಳದಲ್ಲಿ ರೋದಿಸುತ್ತಿರುವ ಕುಟುಂಬ ಅಪಘಾತದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹಗಳನ್ನು ವಾಹನದಿಂದ ಹೊರತೆಗೆದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ತಿರುಪತ್ತೂರು ಮತ್ತು ವಾಣಿಯಂಬಾಡಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಅಪಘಾತದ ಕುರಿತು ನಟ್ರಂಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವನ್ನಪ್ಪಿದ ಮಹಿಳೆಯರನ್ನು ಮೀರಾ, ದೈವನೈ, ಚೇಟಮಾಳ್, ದೇವಕಿ, ಸಾವಿತ್ರಿ ಮತ್ತು ಕಲಾವತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ.
ಇದನ್ನೂ ಓದಿ:Lift collapses : ಮಹಾರಾಷ್ಟ್ರದಲ್ಲಿ 40 ಅಂತಸ್ತಿನಿಂದ ಲಿಫ್ಟ್ ಕುಸಿದು 6 ಮಂದಿ ಕಾರ್ಮಿಕರು ದಾರುಣ ಸಾವು