ತಿನ್ಸುಕಿಯಾ (ಅಸ್ಸೋಂ):ಅಸ್ಸೋಂನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ಅಸ್ಸೋಂನ ತಿನ್‌ಸುಕಿಯಾ ಜಿಲ್ಲೆಯ ಕಾಕ್‌ಪಥರ್‌ನ ಬೋರ್-ಡಿರಾಕ್ದಲ್ಲಿ ಮಂಗಳವಾರ ರಾತ್ರಿ 10.30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ.
ಸ್ಥಳೀಯರಿಂದ ರಕ್ಷಣಾ ಕಾರ್ಯ:ಪೊಲೀಸ್ ಮೂಲಗಳ ಪ್ರಕಾರ, ಟ್ರಕ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಇದರಿಂದ 7 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 12 ಮಂದಿ ಗಾಯಗೊಂಡಿದ್ದು, ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವಿಷಯ ತಿಳಿದ ಸ್ಥಳೀಯರು, ರಕ್ಷಣಾ ಕಾರ್ಯ ಆರಂಭಿಸಿದರು. ಗಾಯಗೊಂಡವರನ್ನು ತಿನ್ಸುಕಿಯಾ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಗಂಭೀರವಾಗಿ ಗಾಯಗೊಂಡವರನ್ನು ಹೆಚ್ಚುವರಿ ಚಿಕಿತ್ಸೆಗಾಗಿ ದಿಬ್ರುಗಢ ಅಸ್ಸೋಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ರಸ್ತೆ ಅಪಘಾತದ ಕುರಿತು ಪೊಲೀಸರಿಂದ ತನಿಖೆ ಆರಂಭ:ಪೊಲೀಸರೊಂದಿಗೆ ಜಿಲ್ಲಾಡಳಿತದ ಅಧಿಕಾರಿಗಳು ಕೂಡ ಸ್ಥಳಕ್ಕೆ ಆಗಮಿಸಿದರು. ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ನಂತರ, ಈ ಘಟನೆ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ಕೈಗೊಂಡಿದ್ದಾರೆ. ಅಪಘಾತಕ್ಕೀಡಾದ ಕಾರಿನಲ್ಲಿ ಇದ್ದವರು ದುಮ್ಡುಮಾದ ವಾರದ ಮಾರುಕಟ್ಟೆಯಿಂದ ದಿರಾಕ್ ಸೋಂಜಾನ್ ಗ್ರಾಮಕ್ಕೆ ಹೋಗುತ್ತಿದ್ದರು ಎಂದು ತಿಳಿದು ಬಂದಿದೆ. ಈ ವೇಳೆಯಲ್ಲಿ ಕಾರು ಹಾಗೂ ಟ್ರಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಟ್ರಕ್ ಅರುಣಾಚಲ ಪ್ರದೇಶದಿಂದ ಬರುತ್ತಿತ್ತು. ಟ್ರಕ್ ಚಾಲಕ ಪಾನಮತ್ತನಾಗಿದ್ದ ಕಾರಣ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ. ಸತ್ಯಾಸತ್ಯತೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಟ್ರಕ್‌ನ ಸಂಖ್ಯೆ AS 23 CC 8930 ಮತ್ತು ಕಾರ್ನ ಸಂಖ್ಯೆ AR 20 A 1093 ಆಗಿದೆ.
ಮೃತರ ಗುರುತು ಪತ್ತೆ ಹಚ್ಚಿದ ಪೊಲೀಸರು:ಈ ಅಪಘಾತದಲ್ಲಿ ಮೃತಪಟ್ಟವರನ್ನು ಪೊಲೀಸರು ಗುರುತಿಸಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಘಟನೆಯಲ್ಲಿ ವಿನಿತಾ (ಬಿಲ್ಲಿ) ಬರುವಾ, ರೀನಾ ಗೊಗೊಯ್, ಮಿಹಿಧರ್ ನಿಯೋಗ್, ಪಹಮನ್ ಮಾರನ್, ಕುಲೈ ಮೆಶ್ ಮತ್ತು ಪಲ್ಲವಿ ದಹೋಟಿಯಾರ್ ಎಂದು ಗುರುತಿಸಲಾಗಿದೆ. ಅತುಲ್ ಗೊಗೊಯ್, ಬುರಂಜಿತ್ ಮಾರನ್, ಜೊನಾಲಿ ಮಾರನ್, ವಿಕಾಸ್ ನಿಯೋಗ್, ಗೋಲೇಶ್ವರ್ ಮಾರನ್, ಮನೋ ಮಾರನ್, ಯಶೋದಾ ಮಾರನ್, ಲಕ್ಷ್ಮೀಮಣಿ ಮಾರನ್, ಎಲಾಟಾ ಮಾರನ್ ಮತ್ತು ಪಿಂಕಿ ಮಾರನ್ ಎಂಬುವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ಚಿತ್ರದುರ್ಗದಲ್ಲಿ ಬೆಳ್ಳಂಬೆಳಗ್ಗೆ ಭೀಕರ ರಸ್ತೆ ಅಪಘಾತ.. ಬಾಲಕ ಸೇರಿ ನಾಲ್ವರು ಸಾವು, ಮೂವರಿಗೆ ಗಾಯ