ಪಾಟ್ನಾ (ಬಿಹಾರ):ಬಿಹಾರದಲ್ಲಿ ಮದ್ಯ ನಿಷೇಧ ಜಾರಿಯಲ್ಲಿದೆ. ಆದರೆ, ಈ ಕಾನೂನನ್ನೇ ಅಪಹಾಸ್ಯ ಮತ್ತು ಅಣಕವಾಡುವ ಘಟನೆ ರಾಜ್ಯ ರಾಜಧಾನಿ ಪಾಟ್ನಾದಲ್ಲಿ ನಡೆದಿದೆ. ಇಲ್ಲಿನ ಪಾಲಿಗಂಜ್ ಅಬಕಾರಿ ಇಲಾಖೆಯ ಪೊಲೀಸ್ ಠಾಣೆಯ ಲಾಕಪ್‌ನಲ್ಲಿ ಐವರು ಆರೋಪಿಗಳು ಲಿಕ್ಕರ್ ಪಾರ್ಟಿ ಮಾಡಿದ್ದಾರೆ.
ಮಂಗಳವಾರ ಮಧ್ಯಾಹ್ನ ಐವರು ಆರೋಪಿಗಳನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಬಂಧಿಸಿ, ಠಾಣೆಯ ಲಾಕಪ್‌ಗೆ ಹಾಕಿದ್ದರು. ಅದೇ ದಿನ ರಾತ್ರಿ ಲಾಕಪ್ನಲ್ಲಿದ್ದಾಗಲೇ ಆರೋಪಿಗಳಿಗೆ ಮದ್ಯ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ. ಅಂತೆಯೇ, ಲಾಕಪ್‌ನಲ್ಲಿ ಎಲ್ಲರೂ ಸೇರಿಕೊಂಡು ಎಣ್ಣೆ ಪಾರ್ಟಿ ಮಾಡಿದ್ದಾರೆ.
ಫ್ಯಾಮಿಲಿಗೆ ವಿಡಿಯೋ ಶೇರ್: ಲಾಕಪ್‌ನಲ್ಲಿ ಮದ್ಯದ ಪಾರ್ಟಿ ಮಾಡಿದ್ದಲ್ಲದೇ, ಇದರಲ್ಲಿ ಒಬ್ಬ ವಿಡಿಯೋ ಮಾಡಿ ತಮ್ಮ ಕುಟುಂಬ ಸದಸ್ಯರಿಗೆ ಶೇರ್ ಮಾಡಿದ್ದಾನೆ. ನಮಗೆ ಇಲ್ಲಿ ಯಾವುದೇ ತೊಂದರೆ ಇಲ್ಲ ಎಂದು ಹೇಳಿ ವಿಡಿಯೋ ಹಂಚಿಕೊಂಡಿದ್ದಾನೆ. ನಂತರ ಈ ವಿಡಿಯೋ ವೈರಲ್ ಆಗಿದ್ದು, ಪಾಟ್ನಾದ ಹಿರಿಯ ಪೊಲೀಸ್ ಅಧಿಕಾರಿಗಳಿಗೂ ವಿಡಿಯೋ ತಲುಪಿದೆ.
ಎಎಸ್‌ಪಿ ಮೊಬೈಲ್ಗೆ ಬಂತು ವಿಡಿಯೋ: ಲಾಕಪ್ನಲ್ಲಿದ್ದ ಆರೋಪಿಗಳು ಮದ್ಯದ ಪಾರ್ಟಿ ಮಾಡುತ್ತಿರುವ ವಿಡಿಯೋ ಪಾಲಿಗಂಜ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅವಧೇಶ್ ದೀಕ್ಷಿತ್ ಅವರ ಮೊಬೈಲ್ಗೆ ವಿಡಿಯೋ ಬಂದಿದೆ. ಈ ವಿಡಿಯೋದಲ್ಲಿ ಐವರು ಆರೋಪಿಗಳು ಮದ್ಯ ಸೇವಿಸುತ್ತಿರುವ ಮತ್ತು ಪೊಲೀಸರೇ ಅವರಿಗೆ ಸಹಕರಿಸುತ್ತಿರುವ ದೃಶ್ಯಗಳು ಸೆರೆಯಾಗಿದೆ.
ಅಂತೆಯೇ ಪೊಲೀಸರ ತಂಡ ಠಾಣೆ ಮೇಲೆ ದಾಳಿ ಮದ್ಯ ಸೇವಿಸಿದ ಐವರು ಆರೋಪಿಗಳು ಹಾಗೂ ಅವರಿಗೆ ಸಹಕರಿಸಿದ ಇಬ್ಬರು ಕಾನ್‌ಸ್ಟೇಬಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, ಲಾಕಪ್‌ಗೆ ಮದ್ಯವನ್ನು ಪೂರೈಸಿದ್ದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.