ಪಂಜಾಬ್:ಪಾಕಿಸ್ತಾನದ ಪೂರ್ವ ಪಂಜಾಬ್ ಪ್ರಾಂತ್ಯದ ಒಕಾರಾ ಜಿಲ್ಲೆಯಲ್ಲಿ ಭಾನುವಾರ ಬೆಳಗ್ಗೆ ಭೀಕರ ದುರಂತ ಸಂಭವಿಸಿದೆ. ಬಸ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಜಿಲ್ಲೆಯ ಅಖ್ತರಾಬಾದ್ ಪ್ರದೇಶದ ಬಳಿಯ ಜಿಟಿ ರಸ್ತೆಯಲ್ಲಿ ಈ ದುರ್ಘಟನೆ ಜರುಗಿದೆ.
ಪ್ರಾಥಮಿಕ ಮೂಲಗಳ ಪ್ರಕಾರ "ಅತಿವೇಗದಿಂದ ಬಂದ ಬಸ್ ರಿಕ್ಷಾಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಕಾಗಿದೆ. ದುರಂತವು ಏಳು ಜನರ ಪ್ರಾಣವನ್ನು ಬಲಿತೆಗೆದುಕೊಂಡಿದೆ. ಗಾಯಗೊಂಡವರಲ್ಲಿ ಒಬ್ಬರು ರಿಕ್ಷಾದಲ್ಲಿದ್ದರೆ, ಇನ್ನೊಬ್ಬರು ಬಸ್‌ನಲ್ಲಿದ್ದರು ಎಂದು ತಿಳಿದು ಬಂದಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. ಶವಗಳನ್ನು ಸಮೀಪದ ಆಸ್ಪತ್ತೆಗೆ ರವಾನಿಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮುಂಬೈ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ನಿನ್ನೆ(ಏ.23) ಮುಂಬೈ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ರಸ್ತೆ ದುರಂತ ಸಂಭವಿಸಿತ್ತು. ಖಾಸಗಿ ಬಸ್ ಮತ್ತು ಟ್ರಕ್ ಮಧ್ಯೆ ಡಿಕ್ಕಿಯಾಗಿ 4 ಮಂದಿ ಸಾವನ್ನಪ್ಪಿ, 20 ಜನರು ಗಾಯಗೊಂಡಿದ್ದರು. ಮೃತರಲ್ಲಿ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರು ಸೇರಿದ್ದರು. ಕಾಟ್ರಾಜ್ ಘಾಟ್ ಬಳಿಯ ಸ್ವಾಮಿನಾರಾಯಣ ದೇವಸ್ಥಾನದ ಬಳಿ ಭಾನುವಾರ ನಸುಕಿನಜಾವ 2 ಗಂಟೆ ಸುಮಾರಿಗೆ ಅವಘಡ ಸಂಭವಿಸಿತ್ತು. ಅಪಘಾತದ ಮಾಹಿತಿ ಪಡೆದ ಕಾಟ್ರಾಜ್ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದರು.