ಶ್ರೀನಗರ/ಮುಂಬೈ:ಜಮ್ಮು ಮತ್ತು ಕಾಶ್ಮೀರ ಹಾಗೂ ಮಹಾರಾಷ್ಟ್ರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಭಾರಿ ಪ್ರಮಾಣದ ಮಾದಕ ವಸ್ತು ಜಪ್ತಿ ಮಾಡಲಾಗಿದೆ. ಕಾಣಿವೆ ನಾಡಿನ ಉಧಂಪುರದಲ್ಲಿ 40 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ವಶಪಡಿಸಿಕೊಂಡಿದ್ದರೆ, ಮುಂಬೈನಲ್ಲಿ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಜಪ್ತಿ ಮಾಡಲಾಗಿದೆ.
ಶುಕ್ರವಾರ ಸಂಜೆ ಉಧಂಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಕಾಶ್ಮೀರದಿಂದ ಜಮ್ಮುವಿಗೆ ಬರುತ್ತಿದ್ದ ಇನ್ನೋವಾ ಕಾರನ್ನು ಪರಿಶೀಲಿಸಿದಾಗ ಅದರಲ್ಲಿ 7 ಕೆಜಿ ಹೆರಾಯಿನ್ ಪತ್ತೆಯಾಗಿದೆ. ಅಂತೆಯೇ ಇನ್ನೋವಾದಲ್ಲಿದ್ದ ಪಂಜಾಬ್ ಮೂಲದ ದಂಪತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬಂಧಿತರನ್ನು ಲವ್ಪ್ರೀತ್ ಸಿಂಗ್ ಮತ್ತು ಈತನ ಪತ್ನಿ ಮನ್ದೀಪ್ ಕೌರ್ ಎಂದು ಗುರುತಿಸಲಾಗಿದೆ. ಪತ್ತೆಯಾದ ಹೆರಾಯಿನ್ನ ಮಾರುಕಟ್ಟೆ ಮೌಲ್ಯ 40 ಕೋಟಿ ರೂ.ಗಳಾಗಿದೆ. ಈ ಹೆರಾಯಿನ್ನನ್ನು ಪಂಜಾಬ್‌ನಿಂದ ತರುವಂತೆ ಯಾರೋ ಹೇಳಿದ್ದರು ಮತ್ತು ಇದಕ್ಕಾಗಿ ಹಣವನ್ನೂ ನೀಡಲಾಗಿತ್ತು ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದರಲ್ಲಿ ಶಾಮೀಲಾದವರ ಪತ್ತೆಗೂ ಕ್ರಮ ವಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದೇಶಿ ಪ್ರಯಾಣಿಕನ ಬಳಿ ಕೊಕೇನ್ ಪತ್ತೆ: ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕನ ಬಳಿ 13 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಪತ್ತೆಯಾಗಿದೆ. ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿದೇಶಿ ಪ್ರಯಾಣಿಕನೊಬ್ಬ ಅನುಮಾನಾಸ್ಪದವಾಗಿ ಓಡುತ್ತಿದ್ದ. ಹೀಗಾಗಿ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, 87 ಕ್ಯಾಪ್ಸೂಲ್ಗಳಲ್ಲಿ ಕೊಕೇನ್ ತುಂಬಿ ಹೊಟ್ಟೆಯಲ್ಲಿಟ್ಟುಕೊಂಡು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ. ಸದ್ಯ ವಿದೇಶಿ ಪ್ರಯಾಣಿಕನನ್ನು ಬಂಧಿಸಿ ಹೆಚ್ಚಿನ ತನಿಖೆ ನಡಸಲಾಗುತ್ತಿದೆ.
ಇದನ್ನೂ ಓದಿ:ವೇಶ್ಯಾವಾಟಿಕೆ ದಂಧೆ: ಗ್ರಾಹಕರ ಸೋಗಿನಲ್ಲಿ ಹೋಗಿ ಬಾಲಕಿ ರಕ್ಷಿಸಿದ ಪೊಲೀಸರು