ನವದೆಹಲಿ:ದೇಶದಲ್ಲಿ ಕೊರೊನಾ ಹಾವಳಿ ಎಲ್ಲೆ ಮೀರಿದ್ದು, ಪ್ರತಿದಿನ ಲಕ್ಷಾಂತರ ಸೋಂಕಿತ ಪ್ರಕರಣ ಕಾಣಿಸಿಕೊಳ್ಳುತ್ತಿರುವ ಕಾರಣ ಬಹುತೇಕ ಎಲ್ಲ ರಾಜ್ಯಗಳಲ್ಲಿ ಆಕ್ಸಿಜನ್ ಸಮಸ್ಯೆ ಉಂಟಾಗಿದೆ.
ಇದೀಗ ವಿದೇಶಗಳಿಂದ ಆಕ್ಸಿಜನ್ ತರುವ ಉದ್ದೇಶದಿಂದ ಭಾರತೀಯ ನೌಕಾಪಡೆ ಆಪರೇಷನ್ ಸಮುದ್ರ ಸೇತು 2 ಕಾರ್ಯಾಚರಣೆ ಆರಂಭಿಸಿದೆ.
'ಆಕ್ಸಿಜನ್ಗಾಗಿ ಆಪರೇಷನ್ ಸಮುದ್ರ ಸೇತು 2' ಏಳು ಭಾರತೀಯ ನೌಕಾ ಹಡಗುಗಳಾದ ಕೋಲ್ಕತ್ತಾ, ಕೊಚ್ಚಿ, ತಲ್ವಾರ್, ತಬಾರ್, ತ್ರಿಕಾಂಡ್, ಜಲಶ್ವಾ ಮತ್ತು ಐರಾವತ್ ಈ ಕಾರ್ಯಾಚರಣೆಗೆ ನಿಯೋಜನೆಗೊಂಡಿವೆ. ಮೊದಲ ಹಂತದಲ್ಲಿ ಬಹ್ರೈನ್, ಸಿಂಗಪುರ ಮತ್ತು ಥಾಯ್ಲೆಂಡ್ಗಳಿಂದ ಆಮ್ಲಜನಕ ತರಲು ನೌಕೆಗಳು ತೆರಳಲಿವೆ. ದೇಶದಲ್ಲಿ ಉಂಟಾಗಿರುವ ಆಮ್ಲಜನಕ ಸಮಸ್ಯೆ ಸರಿದೂಗಿಸುವ ಉದ್ದೇಶದಿಂದ ಆಪರೇಷನ್ ಸಮುದ್ರ ಸೇತು-2 ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ನೌಕಾಪಡೆ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಆಪರೇಷನ್ ಸಮುದ್ರ ಸೇತು ಕಳೆದ ವರ್ಷ ಪ್ರಾರಂಭಗೊಂಡಿದ್ದು, ಕೋವಿಡ್ ಸಮಯದಲ್ಲಿ ನೆರೆಯ ದೇಶಗಳಲ್ಲಿ ಸಿಲುಕಿಕೊಂಡಿದ್ದ ಸುಮಾರು 4,000 ಭಾರತೀಯ ನಾಗರಿಕರನ್ನ ಯಶಸ್ವಿಯಾಗಿ ಭಾರತಕ್ಕೆ ವಾಪಸ್ ಕರೆತರಲಾಗಿತ್ತು.