ತೇಜ್‌ಪುರ(ಅರುಣಾಚಲಪ್ರದೇಶ):ಚೀನಾದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಮೆಂಗ್ ಸೆಕ್ಟರ್ನ ಹಿಮಚ್ಛಾದಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಭಾರೀ ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದ 7 ಮಂದಿ ಭಾರತೀಯ ಸೈನಿಕರ ಮೃತದೇಹಗಳು ಇಂದು ಪತ್ತೆಯಾಗಿವೆ.
ಫೆಬ್ರವರಿ 6 ನೇ ತಾರೀಖು ಕಮೆಂಗ್ ವಲಯದಲ್ಲಿ ಹಿಮದ ಮಧ್ಯೆಯೇ ಗಡಿ ಪಹರೆ ನಡೆಸುತ್ತಿದ್ದಾಗ 7 ಸೈನಿಕರು ಹಿಮ ಕುಸಿತಕ್ಕೆ ಒಳಗಾಗಿ ನಾಪತ್ತೆಯಾಗಿದ್ದರು. ಇವರ ಪತ್ತೆಗೆ ವಿಶೇಷ ತಂಡವನ್ನು ಏರ್ಲಿಫ್ಟ್ ಮಾಡಿ ಶೋಧ, ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು.
ಇಂದು ದುರಾದೃಷ್ಟವಶಾತ್ ಎಲ್ಲ ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಶೋಧ, ರಕ್ಷಣಾ ಕಾರ್ಯಾಚರಣೆ ಮುಕ್ತಾಯಗೊಳಿಸಲಾಗಿದ್ದು, ಎಲ್ಲ 7 ಸೈನಿಕರ ಮೃತದೇಹಗಳು ಪತ್ತೆಯಾಗಿವೆ. ಸರ್ವ ಪ್ರಯತ್ನಗಳ ಹೊರತಾಗಿಯೂ ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.
ಚೀನಾದ ಗಡಿಗೆ ಹೊಂದಿಕೊಂಡಿರುವ 14,500 ಅಡಿ ಎತ್ತರದಲ್ಲಿರುವ ಕಮೆಂಗ್ ವಲಯದಲ್ಲಿ ಕೆಲ ದಿನಗಳಿಂದ ಭಾರಿ ಹಿಮಪಾತ, ಪ್ರತಿಕೂಲ ಹವಾಮಾನ ಉಂಟಾಗಿತ್ತು. ಈ ಮಧ್ಯೆಯೂ ಸೈನಿಕರು ಗಡಿ ಪಹರೆ ಕಾರ್ಯ ನಡೆಸುತ್ತಿದ್ದಾಗ ಹಿಮ ಕುಸಿತಕ್ಕೆ ಒಳಗಾಗಿ ಪ್ರಾಣ ತೆತ್ತಿದ್ದಾರೆ.
ಓದಿ:ಬೆಂಗಳೂರು : ಬಹುಮಹಡಿ ಕಟ್ಟಡದಿಂದ ಬಿದ್ದು ಮೃತಪಟ್ಟ ವೈದ್ಯರ ಮಗ..