ತಿರುವಣ್ಣಾಮಲೈ (ತಮಿಳುನಾಡು): ತಮಿಳುನಾಡಿನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಇಲ್ಲಿನ ಅಣ್ಣಾಮಲೈಯರ್ ದೇವಾಲಯದಲ್ಲಿ ದರ್ಶನ ಮುಗಿಸಿ ಹೊರಟಿದ್ದ ಭಕ್ತರ ಕಾರು ಬಸ್ಗೆ ಡಿಕ್ಕಿ ಹೊಡೆದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ನಡೆದಿದೆ. ಮೃತರೆಲ್ಲರೂ ಅಸ್ಸೋಂ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಇವರು ತಿರುವಣ್ಣಾಮಲೈ ಅಣ್ಣಾಮಲೈಯರ್ ದೇವಸ್ಥಾನದಲ್ಲಿ ದರ್ಶನ ಮುಗಿಸಿ ಹಿಂತಿರುಗುವಾಗ ಅಪಘಾತದ ಸಂಭವಿಸಿದೆ.
ಇಲ್ಲಿನ ಚೆಂಗಾಮ್ನ ಪಕ್ಕಿರಿಪಾಲಯಂ ಬಳಿ ಧರ್ಮಪುರಿಯಿಂದ ತಿರುವಣ್ಣಾಮಲೈಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ತಿರುವಣ್ಣಾಮಲೈನಿಂದ ಬೆಂಗಳೂರಿಗೆ ತೆರಳುತ್ತಿದ್ದ ಟಾಟಾ ಸುಮೋ ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ, ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಟಾಟಾ ಸುಮೋದಲ್ಲಿ ಒಟ್ಟು 10 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಅಪಘಾತ ನಡೆದ ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರಿನಲ್ಲಿದ್ದ 4 ಮಂದಿ ಮತ್ತು ಬಸ್ನಲ್ಲಿದ್ದ 10 ಮಂದಿ ಸೇರಿ ಒಟ್ಟು 14 ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆ ಮತ್ತು ಚೆಂಗಾಮ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿದ್ದ ಇಬ್ಬರಲ್ಲಿ ಓರ್ವ ಚೆಂಗಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇನ್ನೋರ್ವ ತಿರುವಣ್ಣಾಮಲೈ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮೃತಪಟ್ಟಿದ್ದಾನೆ.