ಅಸನ್ಸೋಲ್ (ಪಶ್ಚಿಮ ಬಂಗಾಳ): ಯುವಕ ಮತ್ತು ಯುವತಿಯ ಫೋಟೋ ಕ್ಲಿಕ್ಕಿಸಿದ ಆರೋಪದ ಮೇಲೆ ವೃದ್ಧೆಯೊಬ್ಬರನ್ನು ಹೊಡೆದು ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ನಡೆದಿದೆ. 65 ವರ್ಷದ ಅಮರ್ ಸಿಂಗ್ ಎಂಬುವವರೇ ಹತ್ಯೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಮೃತ ಅಮರ್ ಸಿಂಗ್, ತೃಣಮೂಲ ಕಾಂಗ್ರೆಸ್ ಟ್ರೇಡ್ ಯೂನಿಯನ್‌ನ ಕಾರ್ಯಕರ್ತರಾಗಿದ್ದರು. ಇಲ್ಲಿನ ಆರದಂಗ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಗುರುವಾರ ಸಂಜೆ ಹೊತ್ತು ಎಂದಿನಂತೆ ಹೊರಗಡೆ ಬಂದು ಅಮರ್ ಸಿಂಗ್ ಕುಳಿತಿದ್ದರು. ಇದೇ ವೇಳೆ, ಇದೇ ಸ್ಥಳದಲ್ಲಿ ನೆರೆಯ ಯುವತಿಯೊಬ್ಬಳು, ಬೇರೆ ಪ್ರದೇಶದ ಯುವಕನೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿದ್ದರು ಎನ್ನಲಾಗಿದೆ.
ಫೋಟೋ ಕ್ಲಿಕ್ಕಿಸಿದ ಆರೋಪ: ಆಗ ಇದ್ದಕ್ಕಿದ್ದಂತೆ ಯುವತಿ ಜೊತೆಗಿದ್ದ ಯುವಕ, ಅಮರ್ ಸಿಂಗ್ ತಮ್ಮ ಚಿತ್ರವನ್ನು ತೆಗೆದಿದ್ದಾನೆ ಎಂದು ಗಲಾಟೆ ಮಾಡಿದ್ದಾನೆ. ಅಲ್ಲದೇ, ಇದರ ನಂತರದಲ್ಲಿ ಈ ಯುವಕ ತನ್ನ ಸ್ನೇಹಿತರನ್ನು ಸ್ಥಳಕ್ಕೆ ಕರೆಸಿದ್ದಾನೆ. ಆಗ ಅಮರ್ ಸಿಂಗ್ ಅವರಿಗೆ ಎಲ್ಲರೂ ಸೇರಿಕೊಂಡು ಮನ ಬಂದಂತೆ ಥಳಿಸಿದ್ದಾರೆ. ಇದರ ಪರಿಣಾಮ ಅಮರ್ ಸಿಂಗ್ ಅವರಿಗೆ ಒಳಪೆಟ್ಟುಗಳು ಬಿದ್ದಿದ್ದವು. ಅಲ್ಲದೇ, ಯುವಕರ ದಾಳಿಯಲ್ಲಿ ಜರ್ಜರಿತರಾಗಿ ಮನೆಗೆ ಮರಳಿದ್ದರು ಎನ್ನಲಾಗಿದೆ.
ಅಸ್ವಸ್ಥಗೊಂಡು ಮನೆಗೆ ತೆರಳಿದ್ದ ಅಮರ್ ಸಿಂಗ್: ಈ ವೇಳೆಗೆ ಅಮರ್ ಸಿಂಗ್ ಆಮ್ಲಜನಕದ ಕೊರತೆಯಿಂದ ಅಸ್ವಸ್ಥಗೊಂಡಿದ್ದಾರೆ ಎಂದು ತಿಳಿದು ಕುಟುಂಬ ಸದಸ್ಯರು, ಚಿಕಿತ್ಸೆಗಾಗಿ ಅವರನ್ನು ಅಸನ್ಸೋಲ್ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ನಂತರ ಕುಟುಂಬವು ಆಸ್ಪತ್ರೆಯಿಂದ ಅಮರ್ ಸಿಂಗ್ ಮೃತದೇಹವನ್ನು ಮೊದಲು, ಇಲ್ಲಿನ ಹಟ್ಟನ್ ರಸ್ತೆಯ ಮಾಸ್ಟರ್ ಪ್ಯಾರಾ ಪ್ರದೇಶದ ಇನ್ನೊಂದು ಮನೆಗೆ ಸಾಗಿಸಿದ್ದರು. ಆದರೆ, ಸ್ಥಳೀಯ ನಿವಾಸಿಗಳು ಮತ್ತು ರಾಜಕೀಯ ಮುಖಂಡರು ಘಟನೆಯ ಬಗ್ಗೆ ಪೊಲೀಸರಿಗೆ ದೂರು ನೀಡುವಂತೆ ಅಮರ್ ಸಿಂಗ್ ಅವರ ಕುಟುಂಬಕ್ಕೆ ಸಲಹೆ ನೀಡಿದ್ದರು.