ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) :ಅಮರನಾಥ ಯಾತ್ರೆಯ 31 ನೇ ದಿನವಾದ ಸೋಮವಾರ 6 ಸಾವಿರಕ್ಕೂ ಅಧಿಕ ಭಕ್ತರು ದರ್ಶನ ಪಡೆದರು. ಜುಲೈ 1 ರಿಂದ ಆರಂಭವಾಗಿರುವ ಯಾತ್ರೆಯಲ್ಲಿ ಈವರೆಗೂ 3.97 ಲಕ್ಷ ಭಕ್ತರು ಪವಿತ್ರ ಗುಹೆಯಲ್ಲಿನ ಲಿಂಗವನ್ನು ದರ್ಶಿಸಿದ್ದಾರೆ. ಇದೇ ವೇಳೆ, ಮಂಗಳವಾರ ಜಮ್ಮುವಿನಿಂದ 1,006 ಯಾತ್ರಿಕರ ಬ್ಯಾಚ್ ಗುಹಾ ದೇಗುಲ ಹೊರಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಒಂದು ತಿಂಗಳಿನಿಂದ ನಡೆಯುತ್ತಿರುವ ಯಾತ್ರೆಯಲ್ಲಿ ಇದುವರೆಗೆ ನಾನಾ ಕಾರಣಗಳಿಗಾಗಿ 36 ಯಾತ್ರಿಕರು ಸಾವನ್ನಪ್ಪಿದ್ದಾರೆ. 749 ಪುರುಷರು, 215 ಮಹಿಳೆಯರು, ಇಬ್ಬರು ಮಕ್ಕಳು, 37 ಸಾಧುಗಳು ಮತ್ತು ಮೂವರು ಸಾಧ್ವಿಗಳು ಸೇರಿದಂತೆ 1,006 ಯಾತ್ರಿಗಳ ಬ್ಯಾಚ್ ಜಮ್ಮುವಿನ ಭಗವತಿ ನಗರ ಯಾತ್ರಾ ನಿವಾಸದಿಂದ ಇಂದು ಬೆಳಗ್ಗೆ ಕಣಿವೆಗೆ ಬೆಂಗಾವಲು ಪಡೆಯಲ್ಲಿ ಹೊರಟಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇಂದು ಹೊರಟಿರುವ ಯಾತ್ರಿಕರು ದಕ್ಷಿಣ ಕಾಶ್ಮೀರ ಪಹಲ್ಗಾಮ್ ಮಾರ್ಗದಿಂದ ಹಿಮಾಲಯದ ಗುಹೆಯನ್ನು ತಲುಪುತ್ತಾರೆ. ಪಹಲ್ಗಾಮ್ ಬೇಸ್ ಕ್ಯಾಂಪ್‌ನಿಂದ 43 ಕಿಲೋಮೀಟರ್‌ಗಳವರೆಗೆ ಕಡಿದಾದ ಪ್ರದೇಶವನ್ನು ಹತ್ತಬೇಕಿದೆ. ಬಳಿಕ 14 ಕಿಮೀ ದೂರ ಚಾರಣ ನಡೆಸಬೇಕು. ಉತ್ತರ ಕಾಶ್ಮೀರ ಬಾಲ್ಟಾಲ್ ಬೇಸ್ ಕ್ಯಾಂಪ್‌ನಿಂದ ಎತ್ತರದ ಪ್ರದೇಶವಿದ್ದು ಅದನ್ನು ಭಕ್ತರೆಲ್ಲರೂ ಹತ್ತಬೇಕಿದೆ.