ವಿಶಾಖಪಟ್ಟಣಂ:ಜನ್ಮದಿನ, ಮದುವೆಯನ್ನು ವಿಶೇಷವಾಗಿ ಆಚರಣೆ ಮಾಡಿಕೊಳ್ಳುವುದು ಈಗ ಹೆಚ್ಚಾಗಿದೆ. ಆಂಧ್ರಪ್ರದೇಶದ ನವ ಜೋಡಿಯೊಂದು ಮದುವೆಯ ಹಿನ್ನೆಲೆಯಲ್ಲಿ ಅಂಗಾಂಗ ದಾನಕ್ಕೆ ಒಪ್ಪಿಕೊಂಡಿದ್ದಾರೆ. ಇದಲ್ಲದೇ 60 ಮಂದಿ ಅತಿಥಿಗಳೂ ಕೂಡ ದೇಹದಾನಕ್ಕೆ ರೆಡಿಯಾಗಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ನಿಡದವೋಲು ಸಮೀಪದ ವೇಲಿವೆನ್ನು ಗ್ರಾಮದ ಸತೀಶ್ ಕುಮಾರ್, ಭಾವಿ ಪತ್ನಿ ಸಜೀವ ರಾಣಿ ಜೊತೆಗೂಡಿ ಅಂಗಾಂಗ ದಾನದ ಖಾತ್ರಿ ದಾಖಲೆಗೆ ಸಹಿ ಹಾಕಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವರ್ಷಾಂತ್ಯದ 29ರಂದು ನಿಡದವೋಲುವಿನಲ್ಲಿ ನಡೆಯಲಿರುವ ವಿವಾಹ ಸಮಾರಂಭದಲ್ಲಿ ಸಾವಿತ್ರಿಬಾಯಿ ಫುಲೆ ಎಜುಕೇಶನ್ ಅಂಡ್ ಚಾರಿಟಬಲ್ ಟ್ರಸ್ಟ್ ನವಜೋಡಿ ಮತ್ತು ದಾನಿಗಳಿಂದ ದೇಹದಾನ ದಾಖಲೆಗೆ ಒಪ್ಪಿಗೆ ಪಡೆಯಲಿದ್ದಾರೆ.
ವಧು - ವರರಿಬ್ಬರೂ ಮದುವೆಯ ವೇಳೆ ವಿನೂತನವಾಗಿ ಏನಾದರೂ ಮಾಡಲು ನಿರ್ಧರಿಸಿದ್ದರು. ಅದರಂತೆ ಮೃತಪಟ್ಟ ಬಳಿಕ ದೇಹ ಕೊಳೆತು ಹೋಗುವ ಬದಲು ಇನ್ನೊಬ್ಬರಿಗೆ ನೆರವಾಗುವಂತೆ ಅಂಗಾಂಗ ದಾನ ಮಾಡುವ ಯೋಚನೆ ಮಾಡಿದ್ದಾರೆ.