ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ 60 ಆನೆ ಕಾರಿಡಾರ್‌ಗಳನ್ನು ಗುರುತಿಸಿದೆ. ಆನೆಗಳ ಎರಡು ದೊಡ್ಡ ಆವಾಸಸ್ಥಾನಗಳನ್ನು ಸಂಪರ್ಕಿಸುವ ಮಾರ್ಗವೇ ಈ ಆನೆ ಕಾರಿಡಾರ್. ಇವು ಆನೆಗಳು ಮುಕ್ತವಾಗಿ ತಮ್ಮ ಆವಾಸಸ್ಥಾನದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲು ಅವಕಾಶ ಮಾಡಿಕೊಡುತ್ತದೆ. ಹೊಸ ಆನೆ ಕಾರಿಡಾರ್ ಸೇರ್ಪಡೆ ಮೂಲಕ ದೇಶದಲ್ಲಿ ಇದೀಗ ಆನೆ ಕಾರಿಡಾರ್‌ಗಳ ಸಂಖ್ಯೆ 150 ತಲುಪಿದೆ ಎಂದು ಕೇಂದ್ರ ಪರಿಸರ ಸಚಿವಾಲಯದ ವರದಿ ತಿಳಿಸಿದೆ.
ಕಡೆಯದಾಗಿ 2010ರಲ್ಲಿ ಕೇಂದ್ರ ಸರ್ಕಾರ ಆನೆ ಕಾರಿಡಾರ್ ಗುರುತಿಸಿ, ಒಟ್ಟು 88 ಆನೆ ಕಾರಿಡಾರ್ ಪಟ್ಟಿ ಬಿಡುಗಡೆ ಮಾಡಿತ್ತು. ಈ ವರದಿಯನ್ನು ಕೇಂದ್ರ ಪರಿಸರ ಖಾತೆ ಸಚಿವ ಭುಪೇಂದ್ರ ಯಾದವ್ ಈ ತಿಂಗಳ ಆಗಸ್ಟ್ 12ರಂದು ಪ್ರಕಟಿಸಿದ್ದರು. ವರದಿಯಲ್ಲಿ 2010ರಲ್ಲಿ ಪಟ್ಟಿ ಮಾಡಲಾದ 88 ಆನೆ ಕಾರಿಡಾರ್‌ಗಳಲ್ಲಿ 74 ಆನೆ ಕಾರಿಡಾರ್‌ಗಳ ಬಳಕೆ ಸಕ್ರಿಯವಾಗಿವೆ ಎಂದು ತಿಳಿಸಲಾಗಿದೆ.
ಕಾರಿಡಾರ್‌ಗಳನ್ನು ಪತ್ತೆ ಮಾಡಿರುವುದರಿಂದ ಇವು ಆನೆಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸುರಕ್ಷಿತವಾಗಿ ಚಲಿಸಲು ಅವಕಾಶ ಮಾಡಿಕೊಡುತ್ತದೆ. ಮಾನವ-ಪ್ರಾಣಿಗಳ ಸಂಘರ್ಷವನ್ನು ತಗ್ಗಿಸುವ ಜೊತೆಗೆ ಸಂಚಾರದ ವೇಳೆ ಪ್ರಾಣಿಗಳ ಅಪಘಾತ ಕಡಿಮೆ ಮಾಡುತ್ತದೆ. 2019-21ರವರೆಗೆ ಮಾನವ- ಆನೆಗಳ ಸಂಘರ್ಷದಲ್ಲಿ 301 ಆನೆಗಳು ಮತ್ತು 1,401 ಮನುಷ್ಯರು ಸಾವನ್ನಪ್ಪಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಅತಿ ಹೆಚ್ಚಿನ ಆನೆ ಕಾರಿಡರ್ (26) ಗುರುತಿಸಲಾಗಿದೆ. 2021ರಲ್ಲಿ ಸಚಿವಾಲಯ ಕಾರಿಡಾರ್ ಗುರುತಿಸುವಿಕೆಯನ್ನು ಆರಂಭಿಸಿತು. ಎರಡು ವರ್ಷಗಳ ಬಳಿಕ ನಾವು ವರದಿ ಸಿದ್ಧ ಮಾಡಿದ್ದು, 150 ಕಾರಿಡಾರ್ ಪತ್ತೆ ಮಾಡಿದ್ದೇವೆ ಎಂದು ಹೇಳಿದೆ. ಹಾಗೆಂದ ಮಾತ್ರಕ್ಕೆ ಕೇವಲ 150 ಕಾರಿಡಾರ್ ಇದೆ ಎಂದು ಅರ್ಥವಲ್ಲ. ಈ ಸಂಖ್ಯೆ ಇನ್ನೂ ಹೆಚ್ಚಿರಬಹುದು. ಆದರೆ, ನಮ್ಮಿಂದ ಪತ್ತೆ ಮಾಡಲು ಸಾಧ್ಯವಾಗಿದ್ದು 150 ಎಂದು ಸಚಿವಾಲಯದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
MoEFCCನ ಎಲಿಫೆಂಟ್ ಪ್ರಾಜೆಕ್ಟ್ ಮತ್ತು ರಾಜ್ಯ ಅರಣ್ಯ ಇಲಾಖೆ ಜೊತೆ ಭಾರತದ ವನ್ಯಜೀವಿ ಸಂಸ್ಥೆಯ ತಾಂತ್ರಿಕ ಬೆಂಬಲದ ಒಟ್ಟಾರೆ ಪ್ರಯತ್ನದಿಂದ ಈ ವರದಿ ಹೊರಬಂದಿದೆ. ಶೇ 84ರಷ್ಟು (126) ಆನೆ ಕಾರಿಡಾರ್ಗಳು ರಾಜ್ಯ ಗಡಿಯೊಳಗೆ ಬಂದಿದೆ. ಶೇ 12ರಷ್ಟು ಅಂದರೆ 19 ಕಾರಿಗಳು ಅಂತರರಾಜ್ಯ ಆನೆ ಕಾರಿಡಾರ್ ಆಗಿದ್ದು, ಇದು ರಾಜ್ಯದಿಂದ ರಾಜ್ಯಕ್ಕೆ ಪ್ರವೇಶ ಹೊಂದಿದೆ. ಇದರ ಜೊತೆಗೆ 6 ಅಂತರರಾಷ್ಟ್ರೀಯ ಆನೆ ಕಾರಿಡಾರ್‌ಗಳಿದ್ದು, ಇದು ಭಾರತ ಮತ್ತು ನೇಪಾಳ ಗಡಿ ಹೊಂದಿವೆ. ಈ ಕಾರಿಡಾರ್‌ಗಳ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರವು ರಾಜ್ಯ ಸರ್ಕಾರದೊಂದಿಗೆ ಭೂ-ಮೌಲ್ಯಮಾಪನ ಸಮೀಕ್ಷೆಗಳನ್ನು ನಡೆಸಿದೆ.
ಜಗತ್ತಿನಲ್ಲಿಯೇ ಏಷ್ಯಾನ್ ಆನೆ ಅಳಿವಿನಂಚಿನ ಪ್ರಾಣಿ. ಪ್ರಸ್ತುತ ಏಷ್ಯಾದ 13 ಪ್ರದೇಶಗಳಲ್ಲಿ ಈ ಆನೆಗಳಿವೆ. ಭಾರತ ಅತ್ಯಂತ ದೊಡ್ಡ ಸಂಖ್ಯೆಯಲ್ಲಿ ಆನೆಗಳ ಸಂತತಿ, ಅಂದರೆ ಶೇ 60 ರಷ್ಟನ್ನು ಹೊಂದಿದೆ. (ಎಎನ್ಐ)
ಇದನ್ನೂ ಓದಿ: ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವ!