ಭೋಪಾಲ್ (ಮಧ್ಯಪ್ರದೇಶ) : ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಸೂಕ್ತ ಸಮಯಕ್ಕೆ ಆಂಬ್ಯುಲೆನ್ಸ್ ಸೌಲಭ್ಯ ದೊರೆಯುತ್ತಿಲ್ಲ ಎಂಬ ಆರೋಪಗಳು ಆಗಾಗ ಕೇಳಿಬರುತ್ತಿವೆ. ಇದಕ್ಕೆ ಕನ್ನಡಿ ಹಿಡಿದಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆರು ವರ್ಷದ ಬಾಲಕನೋರ್ವ ಮರದ ತಳ್ಳುವ ಗಾಡಿಯ ಮೇಲೆ ಅನಾರೋಗ್ಯದಿಂದ ಬಳಲುತ್ತಿರುವ ತಂದೆಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಮನಕಲಕುವ ಘಟನೆ ನಡೆದಿದೆ.
ವೈರಲ್ ವಿಡಿಯೋದಲ್ಲಿ, ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿರುವ ಬಾಲಕನೋರ್ವ ತಂದೆಯನ್ನು ಮಲಗಿಸಿಕೊಂಡು ಕರೆತರುತ್ತಿದ್ದಾನೆ. ಆತನ ತಾಯಿ ಗಾಡಿಯೆದುರು ಬದಿಯಿಂದ ತಳ್ಳುತ್ತಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ಬಲಿಯಾರಿ ಪಟ್ಟಣದಲ್ಲಿ ನಡೆದ ಘಟನೆ ಇದಾಗಿದೆ.
ಬಡ ಕುಟುಂಬವೊಂದು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಆಂಬ್ಯುಲೆನ್ಸ್‌ಗಾಗಿ ಕಾದಿತ್ತು. ಆದರೆ, ವಾಹನ ಬರಲು ತಡವಾಗಿದ್ದು ಪುಟ್ಟ ಬಾಲಕನೇ ತನ್ನ ತಂದೆಯನ್ನು ಮರದ ಗಾಡಿಯಲ್ಲಿ ಆಸ್ಪತ್ರೆಗೆ ಕರೆತಂದಿದ್ದಾನೆ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಿಂಗ್ರೌಲಿ ಜಿಲ್ಲಾಡಳಿತ, ಶನಿವಾರ ಸಂಜೆ ಈ ಕುರಿತು ತನಿಖೆ ನಡೆಸುವಂತೆ ಆದೇಶಿಸಿದೆ.